ಬೆಂಗಳೂರು, ಅ. 21 (DaijiworldNews/SM): ರಾಜ್ಯದಲ್ಲಿ ಬಂಡವಾಳ ಹೂಡಿಕೆಗೆ ಗಲ್ಫ್ ಸಹಕಾರ ಸಮಿತಿ ಹೂಡಿಕೆದಾರರ ನಿಯೋಗ ಮುಂದಾಗಿದೆ ಎಂದು ಸಚಿವ ಡಾ. ಸಿ.ಎನ್. ಅಶ್ವತ್ಥ ನಾರಾಯಣ ತಿಳಿಸಿದ್ದಾರೆ.
ಯುಎಇ, ಸೌದಿ ಅರಬೀಯಾ ಮತ್ತು ಒಮನ್ ನಂತಹ ರಾಷ್ಟ್ರಗಳು ರಾಜ್ಯದಲ್ಲಿ ಹೂಡಿಕೆ ಮಾಡಲು ಮುಂದಾಗಿವೆ ಎಂದು ಸಚಿವರು ತಿಳಿಸಿದ್ದಾರೆ. ಬೆಂಗಳೂರು ಹೊರವಲಯದಲ್ಲಿ ವಿಶ್ವದರ್ಜೆ ಮಟ್ಟದ ಡಿಸೈನ್ ಡಿಸ್ಟ್ರಿಕ್ಟ್ ಸ್ಥಾಪನೆ ಸೇರಿದಂತೆ ಇನ್ನಿತರ ಪ್ರಮುಖ ಹೂಡಿಕೆ ಪ್ರಸ್ತಾಪಗಳಿಗೆ ವಿದೇಶಿ ಕಂಪೆನಿಗಳು ಒಲವು ಹೊಂದಿವೆ. ಈ ಬಗ್ಗೆ ವಿದೇಶಿ ಪ್ರವಾಸದ ಸಂದರ್ಭದಲ್ಲಿ ಸಚಿವ ಡಾ. ಅಶ್ವತ್ಥ ನಾರಾಯಣ್ ಚರ್ಚೆ ನಡೆಸಿದ್ದು, ಬೆಂಗಳೂರಿಗೆ ಆಗಮಿಸಿದ ಬಳಿಕ ಮಾಹಿತಿ ನೀಡಿದ್ದಾರೆ.
1 ಸಾವಿರ ಕೋಟಿ ರೂ. ಉದ್ದೇಶಿತ ಡಿಸೈನ್ ಡಿಸ್ಟ್ರಿಕ್ಟ್ ಸುಮಾರು 100 ರಿಂದ 150 ಎಕರೆ ಪ್ರದೇಶದಲ್ಲಿ ಅಸ್ವಿತ್ವಕ್ಕೆ ಬರಲಿದೆ ಎಂದಿದ್ದಾರೆ. ಇದರಲ್ಲಿ ಉದ್ಯಮರಂಗಕ್ಕೆ ಬೇಕಾಗುವ ಪ್ರತಿಯೊಂದು ವಸ್ತುವನ್ನೂ ಜಾಗತಿಕ ಮಟ್ಟದಲ್ಲಿ ವಿನ್ಯಾಸಗೊಳಿಸಲಾಗುವುದು ಅವರು ತಿಳಿಸಿದ್ದಾರೆ.