ನವದೆಹಲಿ, ಅ. 21 (DaijiworldNews/SM): ಈಗಾಗಲೇ ವರುಣಾರ್ಭಟದಿಂದ ತತ್ತರಿಸಿದ ಉತ್ತರಖಂಡ್ ನಲ್ಲಿ ಮತ್ತೆ ಮಳೆಯ ಆರ್ಭಟ ಮುಂದುವರೆದಿದೆ. 120 ವರ್ಷಗಳಲ್ಲೇ ಮೊದಲ ಬಾರಿಗೆ ಭೀಕರ ಮಳೆಯಿಂದ ತತ್ತರಿಸಿದೆ.
ಬುಧವಾರ ಮತ್ತೆ ಆರು ಮೃತದೇಹಗಳನ್ನು ಪತ್ತೆ ಮಾಡಲಾಗಿದೆ. ಇದರೊಂದಿಗೆ ಈ ಭಾಗದಲ್ಲಿ ಮಳೆ ಸಂಬಂಧಿ ಅವಘಡಗಳಿಗೆ ಸಿಲುಕಿ ಮೃತಪಟ್ಟವರ ಸಂಖ್ಯೆ 52ಕ್ಕೆ ಏರಿಕೆಯಾಗಿದೆ.
ಉತ್ತರ ಪ್ರದೇಶ, ಸಿಕ್ಕಿಂ ಮತ್ತು ಉತ್ತರ ಬಂಗಾಳದ ಪ್ರದೇಶಗಳಲ್ಲಿ ಭಾರೀ ಮಳೆಯಿಂದಾಗಿ ಭೂಕುಸಿವಾಗಿದೆ. ಕೆಲವು ಕಡೆಗಳಲ್ಲಿ ಹೆದ್ದಾರಿಯಲ್ಲೂ ಕುಸಿತ ಸಂಭವಿಸಿದೆ. ಈ ನಡುವೆ ಗ್ಯಾಂಗ್ಟಾಕ್ ಅನ್ನು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 10 ಅನ್ನು ಸಂಪೂರ್ಣ ಬಂದ್ ಮಾಡಲಾಗಿದೆ.
ಕಳೆದ ಎರಡು ದಿನಗಳಿಂದ ಉತ್ತರ ಪ್ರದೇಶದ ಬರೇಲಿ ಮತ್ತು ಪಿಲಿಭಿತ್ ಜಿಲ್ಲೆಗಳಲ್ಲಿ ಸುರಿದ ಭಾರೀ ಮಳೆಯಿಂದಾಗಿ ಮೂವರು ಸಾವನ್ನಪ್ಪಿದ್ದಾರೆ ಮತ್ತು ನೂರಾರು ಜನರು ನಿರಾಶ್ರಿತರಾಗಿದ್ದಾರೆ. ಇನ್ನೊಂದೆಡೆ ಜನರ ಸ್ಥಳಾಂತರ ಕಾರ್ಯವನ್ನು ಎನ್ ಡಿಆರ್ ಎಫ್ ಯೋಧರು ನಡೆಸುತ್ತಿದ್ದಾರೆ. ಅಪಾಯದಲ್ಲಿರುವ ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸುವ ಕಾರ್ಯವಾಗುತ್ತಿದೆ.