ನವದೆಹಲಿ, ಅ.20 (DaijiworldNews/PY): ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ಉತ್ತರಪ್ರದೇಶದ ಕುಶಿನಗರದಲ್ಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಉದ್ಘಾಟಿಸಿದರು.
ಈ ಸಂದರ್ಭ ಮಾತನಾಡಿದ ಅವರು, "ಈ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಕೇವಲ ವಾಯು ಸಂಪರ್ಕಕ್ಕೆ ಮಾತ್ರವಲ್ಲ, ಎಲ್ಲರಿಗೂ ಪ್ರಯೋಜನ ನೀಡುತ್ತದೆ. ಅಲ್ಲದೇ, ಇಲ್ಲಿನ ಯುವಕರಿಗೆ ಉದ್ಯೋಗ ಸೃಷ್ಟಿಸುತ್ತದೆ" ಎಂದಿದ್ದಾರೆ.
ಉತ್ತರಪ್ರದೇಶದ ಕುಶಿನಗರ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನಾಗಿ ಘೋಷಣೆ ಮಾಡಲು ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯ ಕೇಂದ್ರ ಸಂಪುಟ ಜೂನ್ 2020ರಲ್ಲಿ ಅನುಮೋದನೆ ನೀಡಿತ್ತು.
ಈ ವಿಮಾನ ನಿಲ್ದಾಣವು 260 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿದ್ದು, ದೇಶೀಯ ವಿಮಾನಗಳು ಕೂಡಾ ಸಂಚರಿಸಲಿವೆ.
ಬಳಿಕ ನಡೆದ ಕಾರ್ಯಕ್ರಮದಲ್ಲಿ ಬೋಧಿ ವೃಕ್ಷ ನೆಟ್ಟು ಬಳಿಕ ಬೌದ್ಧ ಸೂತ್ರಗಳ ತಾಳೆಗರಿ ಗ್ರಂಥಗಳು, ಅಜಂತಾ ಗುಹೆಗಳಲ್ಲಿ ರಚಿತವಾಗಿರುವ ಚಿತ್ರಗಳ ಪ್ರದರ್ಶನವನ್ನು ಪ್ರಧಾನಿ ಮೋದಿ ವೀಕ್ಷಿಸಿದ್ದಾರೆ.