ನವದೆಹಲಿ, ಅ.20 (DaijiworldNews/PY): "ಸಿಂಘು ಗಡಿಯಲ್ಲಿ ಕಾರ್ಮಿಕರ ಹತ್ಯೆ, ರೈತರ ಪ್ರತಿಭಟನೆಗೆ ಕಳಂಕ ತರುವ ಸಂಚು" ಎಂದು ಪಂಜಾಬ್ನ ಉಪಮುಖ್ಯಮಂತ್ರಿ ಸುಖಜಿಂದರ್ ಸಿಂಗ್ ಆರೋಪ ಮಾಡಿದ್ದಾರೆ.
ನಿಹಾಂಗ್ ಗುಂಪಿನ ನಾಯಕರೊಂದಿಗೆ ಕೇಂದ್ರ ಸಚಿವ ನರೇಂದ್ರ ಸಿಂಗ್ ತೋಮರ್ ಅವರು ಇದ್ದಾರೆ ಎಂದು ಹೇಳಲಾದ ಚಿತ್ರವನ್ನು ಉಲ್ಲೇಖಿಸಿ ಆರೋಪಿಸಿದ್ದಾರೆ. ಸುಖಜಿಂದರ್ ಸಿಂಗ್ ಅವರು ಉಲ್ಲೇಖಿಸಲಾದ ಗ್ರೂಪ್ ಫೋಟೋದಲ್ಲಿ ತೋಮರ್ ಅವರೊಂದಿಗೆ ಸಿಖ್ ನಿಹಾಂಗ್ ಗುಂಪಿನ ನೀಲಿ ನಿಲುವಂಗಿ ಧರಿಸಿದ ವ್ಯಕ್ತಿ ಕಾಣಿಸಿಕೊಂಡಿದ್ದಾರೆ.
"ಕೃಷಿ ಸಚಿವ ಎನ್ ಎಸ್ ತೋಮರ್ ಅವರು ನಿಹಾಂಗ್ ನಾಯಕರೊಂದಿಗೆ ಸಂಪರ್ಕದಲ್ಲಿದ್ದಾರೆ ಎನ್ನುವ ವಿಚಾರವು ಕಾರ್ಮಿಕನ ಹತ್ಯೆ ಪ್ರಕರಣಕ್ಕೆ ತಿರುವು ಪಡೆದುಕೊಂಡಿದೆ. ರೈತರ ಪ್ರತಿಭಟನೆಗೆ ಕಳಂಕ ತರುವ ಸಂಚು ರೂಪಿಸಿದಂತೆ ಕಾಣುತ್ತಿದೆ" ಎಂದು ರಾಂಧವ ಆರೋಪಿಸಿದ್ದಾರೆ.
"ಸಿಂಘು ಗಡಿಗೆ ಆತನನ್ನು ಯಾರು ಕರೆತಂದರು ಹಾಗೂ ಒಂದು ಹೊತ್ತಿನ ಊಟಕ್ಕೂ ಸಮಸ್ಯೆ ಇರುವ ಅವರ ಪ್ರಯಾಣಕ್ಕೆ ಹಣ ನೀಡಿದವರು ಯಾರು? ಎನ್ನುವುದನ್ನು ನಾವು ಪತ್ತೆ ಹಚ್ಚಬೇಕಿದೆ" ಎಂದಿದ್ದಾರೆ.
"ಆ ವ್ಯಕ್ತಿಯನ್ನು ಯಾವ ಪರಿಸ್ಥಿತಿಯಲ್ಲಿ ತಮ್ಮ ಮನೆಯಿಂದ ಸಿಂಘು ಗಡಿಗೆ ಕರೆದೊಯ್ಯಲಾಗಿದೆ ಎನ್ನುವುದನ್ನು ಪತ್ತೆ ಮಾಡುವ ಸಲುವಾಗಿ ಸ್ತಳೀಯ ಆಡಳಿತಕ್ಕೆ ಸೂಚಿಸಿದ್ದೇನೆ" ಎಂದು ತಿಳಿಸಿದ್ದಾರೆ.