ವಿಜಯಪುರ, ಅ.20 (DaijiworldNews/PY): "ಬಿಜೆಪಿ ಅವರ ಆರ್ಎಸ್ಎಸ್ ಶಾಖೆ ನನಗೆ ಬೇಡ. ನಾನು ಇಲ್ಲಿ ಬಡವರ ಬಗ್ಗೆ ಕಲಿತ ಶಾಖೆ ಸಾಕು. ನಾನು ಆರ್ಎಸ್ಎಸ್ ಶಾಖೆಯಿಂದ ಕಲಿಯುವುದು ಏನೂ ಇಲ್ಲ" ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ತಿಳಿಸಿದ್ದಾರೆ.
ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಅಧಿಕಾರಿಶಾಹಿಗಳ ತಂಡವನ್ನು ರಚಿಸಿ ಅವರನ್ನು ವಿವಿಧ ಸಂಸ್ಥೆಗಳಲ್ಲಿ ಇರಿಸಲಾಗಿದೆ. ಆರ್ಎಸ್ಎಸ್ ನಿರ್ದೇಶನದಂತೆ ರಾಜ್ಯದಲ್ಲಿರುವ ಬಿಜೆಪಿ ಸರ್ಕಾರಗಳು ಕಾರ್ಯ ನಿರ್ವಹಿಸುತ್ತಿವೆ. ಪ್ರಧಾನಿ ನರೇಂದ್ರ ಮೋದಿ ಅವರು ಆರ್ಎಸ್ಎಸ್ನ ಕೈಗೊಂಬೆ" ಎಂದಿದ್ದಾರೆ.
"ಆರ್ಎಸ್ಎಸ್ನಿಂದ ತರಬೇತಿ ಪಡೆದುಬಂದವರು ವಿಧಾನಸೌಧದಲ್ಲಿ ಕಲಾಪ ನಡೆಯುವ ಸಂದರ್ಭ ನೀಲಿ ಚಿತ್ರ ವೀಕ್ಷಿಸುತ್ತಿರುತ್ತಾರೆ" ಎಂದು ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದ್ದಾರೆ.
"ಆರ್ಎಸ್ಎಸ್ನಿಂದ ತರಬೇತಿ ಪಡೆದುಬಂದವರಿಗೆ ಸದನಸಲ್ಲಿ ಕಲಾಪ ನಡೆಯುವ ವೇಳೆ ಹೇಗೆ ವರ್ತಿಸಬೇಕು ಎಂದು ತಿಳಿದಿಲ್ಲವೇ?. ಆ ರೀತಿಯಾದ ಕೆಟ್ಟದನ್ನು ಕಲಿಯಲು ನಾನು ಆರ್ಎಸ್ಗೆ ಹೋಗಬೇಕೇ?" ಎಂದು ಕೇಳಿದ್ದಾರೆ.