ಬೆಂಗಳೂರು, ಅ 19 (DaijiworldNews/MS): ಕಾಂಗ್ರೆಸ್ ನಾಯಕ ‘ರಾಹುಲ್ ಗಾಂಧಿ ಓರ್ವ ಡ್ರಗ್ ಅಡಿಕ್ಟ್, ಪೆಡ್ಲರ್’ ಎಂಬ ವರದಿಯಿದೆ ಎಂಬ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಹೇಳಿಕೆಗೆ ಸಿಡಿಮಿಡಿಗೊಂಡಿರುವ ಕಾಂಗ್ರೆಸ್ ನಾಯಕ ದಿನೇಶ್ ಗುಂಡೂರಾವ್ ಕಟೀಲ್ ಒಬ್ಬ ಅವಿವೇಕಿ, ತಲೆ ಕೆಟ್ಟಿದೆ. ಅವರು ಮಾನಸಿಕ ಅಸ್ವಸ್ಥರಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಳಿನ್ ಕುಮಾರ್ ಅವರ ಮನಸ್ಸು ಎಷ್ಟು ಕೊಳಕಾಗಿದೆ ಎಂಬುದು ಅವರ ಹೇಳಿಕೆಯಿಂದಲೇ ಗೊತ್ತಾಗುತ್ತಿದೆ. ಅವಿವೇಕಿಯನ್ನು ರಾಜ್ಯಾಧ್ಯಕ್ಷರನ್ನಾಗಿ ಮಾಡಿದ್ದಾರೆ ಕಟೀಲು, ಯತ್ನಾಳ್, ಸಿ.ಟಿ.ರವಿ, ಹೆಗಡೆ ಇವರೆಲ್ಲ ಬಿಜೆಪಿ ಹೀರೋಗಳು. ಇವರು ಆಡುವ ಮಾತು, ಬಳಸುವ ಭಾಷೆ ಎಂಥಾದ್ದು ಎಂಬುದು ಜಗಜ್ಜಾಹೀರಾಗುತ್ತಿದೆ. ಇಂಥವರನ್ನೆಲ್ಲ ಬೆಂಬಲಿಸುವವರೇ ನರೇಂದ್ರ ಮೋದಿಯಂಥವರು. ನಳೀನ್ ಕಟೀಲ್ ಅವರಿಗೆ ಕ್ಷಮೆ ಕೇಳುವ ಅರ್ಹತೆಯೂ ಇಲ್ಲ. ಮೊದಲು ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದಿಂದ ವಜಾಗೊಳಿಸಿ, ಬಾಯಿ ಮುಚ್ಚಿಕೊಂಡು ಇರಪ್ಪ ಎಂದು ಬಿಜೆಪಿಯವರು ಹೇಳಲಿ ಎಂದು ಒತ್ತಾಯಿಸಿದ್ದಾರೆ.
ಹಾನಗಲ್ ಹಾಗೂ ಸಿಂದಗಿ ಉಪಚುನಾವಣಾ ಪ್ರಚಾರ ಅಖಾಡದ ಹಿನ್ನಲೆಯಲ್ಲಿ ಹುಬ್ಬಳ್ಳಿಯಲ್ಲಿ ಮಾತನಾಡಿದ ನಳಿನ್ ಕುಮಾರ್ ರಾಹುಲ್ ಗಾಂಧಿ ಓರ್ವ ಡ್ರಗ್ ಅಡಿಕ್ಟ್, ಡ್ರಗ್ ಪೆಡ್ಲರ್…ಹೀಗಂತ ನಾನು ಹೇಳುತ್ತಿಲ್ಲ ವರದಿಯಲ್ಲಿ ಹೇಳಲಾಗಿದೆ. ಒಂದು ರಾಜಕೀಯ ಪಕ್ಷವನ್ನೇ ಮುನ್ನಡೆಸಲಾಗದವರು ಇನ್ನು ದೇಶವನ್ನು ಮುನ್ನಡೆಸಲು ಸಾಧ್ಯವೇ? ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು.