ಬೆಂಗಳೂರು, ಅ.19 (DaijiworldNews/HR): ಪೊಲೀಸರು ಕೇಸರಿ ಶಲ್ಯ ಧರಿಸಿದ ಬಗ್ಗೆ ರಾಜಕೀಯ ಮಾಡುವ ವಿಪಕ್ಷಗಳು ಮುಂದೆ ಕೇಸರಿ ಬಾತ್ ನಿಷೇಧಿಸಬೇಕು ಎಂದರೆ ಒಪ್ಪಲಾಗುತ್ತದೆಯೇ? ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಪ್ರಶ್ನಿಸಿದ್ದಾರೆ.
ಈ ಕುರಿತು ಮಾತನಾಡಿದ ಅವರು, "ಶಿವಮೊಗ್ಗದಲ್ಲಿ ದಸರಾ ಪೂಜೆಯ ವೇಳೆ ಪೊಲೀಸರು ಕೇಸರಿ ಶಲ್ಯ ಧರಿಸಿರುವುದು ವೈಯಕ್ತಿಕ ಮತ್ತು ಸಾಂಪ್ರದಾಯಿಕ ವಿಚಾರ. ಕೇಸರಿ ಒಂದು ಸಾಂಕೇತಿಕ ಉಡುಪು ಮಾತ್ರ, ಬಿಜೆಪಿ ಪಕ್ಷಕ್ಕೆ ಮಾತ್ರ ಸೀಮಿತವಲ್ಲ. ಯಾರು ಬೇಕಾದರೂ ಧರಿಸಬಹುದು. ಹೀಗಾಗಿ ಶಲ್ಯ ಧರಿಸಿದ್ದರಲ್ಲಿ ಪೊಲೀಸರ ತಪ್ಪಿಲ್ಲ. ವಿಪಕ್ಷಗಳು ಕೇಸರಿ ಶಲ್ಯ ಧರಿಸಿದ ಬಗ್ಗೆ ಟೀಕಿಸುವ ಮೂಲಕ ಒಂದು ಸಮುದಾಯ ಓಲೈಕೆ ಮಾಡುವುದನ್ನು ಕೈಬಿಡಬೇಕು" ಎಂದರು.
ಇನ್ನು "ಕೆಲವು ಪೊಲೀಸ್ ಠಾಣೆಗಳಲ್ಲಿ ಕೆಲಸ ಮಾಡುವ ಮುಸಲ್ಮಾನ ಪೊಲೀಸ್ ಸಿಬ್ಬಂದಿ ನಮಾಜ್ ಮಾಡಿ ಬರುತ್ತಾರೆ. ಅದನ್ನು ನಾವು ವಿರೋಧಿಸದೆ ಸಂಸ್ಕೃತಿಯ ಪ್ರತೀಕವಾಗಿ ಕಾಣುತ್ತೇವೆ. ಈಗ ಪೊಲೀಸರು ಪೂಜೆಯ ವೇಳೆ ಶಲ್ಯ ಧರಿಸಿದ್ದನ್ನು ಬಿಜೆಪಿ ಬೆಂಬಲಿಸುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ" ಎಂದು ಹೇಳಿದ್ದಾರೆ.