ನವದೆಹಲಿ, ಅ 19 (DaijiworldNews/MS): ಬಿಜೆಪಿ ತೊರೆದು ಟಿಎಂಸಿ ಸೇರಿರುವ ಮಾಜಿ ಕೇಂದ್ರ ಸಚಿವ ಬಾಬುಲ್ ಸುಪ್ರಿಯೋ, ಅ.19ರ ಮಂಗಳವಾರ ತಮ್ಮ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ದೆಹಲಿಯಲ್ಲಿರುವ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರ ಅಧಿಕೃತ ನಿವಾಸಕ್ಕೆ ಭೇಟಿ ನೀಡಿದ ಬಾಬುಲ್ ಸುಪ್ರಿಯೋ, ಬಿಜೆಪಿ ಸಂಸದ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು. ಅವರ ರಾಜೀನಾಮೆಯನ್ನು ಸ್ಪೀಕರ್ ಓಂ ಬಿರ್ಲಾ ಅಂಗೀಕರಿಸಿದರು.
ರಾಜೀನಾಮೆ ಸಲ್ಲಿಸಿ ದ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಅವರು, " ನನ್ನ ರಾಜಕೀಯ ಜೀವನ ಆರಂಭವಾಗಿದ್ದು ಬಿಜೆಪಿ ಪಕ್ಷದಿಂದ ಹೀಗಾಗಿ ಬಿಜೆಪಿಯೊಂದಿಗೆ ಅಧಿಕೃತವಾಗಿ ಸಂಬಂಧ ಕಡಿದುಕೊಳ್ಳುತ್ತಿರುವುದು ಮನಸ್ಸನ್ನು ಭಾರಗೊಳಿಸಿದೆ. ಬಿಜೆಪಿ ತೊರೆಯುತ್ತಿರುವುದು ನನ್ನ ಪಾಲಿಗೆ ಅಷ್ಟು ಸುಲಭವಲ್ಲ ಎಂದು ಬಾಬುಲ್ ಸುಪ್ರಿಯೋ ಹೇಳಿದರು.
ನನ್ನ ಮೇಲೆ ನಂಬಿಕೆಯಿಟ್ಟು ಪಕ್ಷ ಮತ್ತು ಸರ್ಕಾರದಲ್ಲಿ ಜವಾಬ್ದಾರಿ ನೀಡಿದ ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರಿಗೆ ನಾನು ಧನ್ಯವಾದ ಅರ್ಪಿಸುತ್ತೇನೆ ಎಂದು ಬಾಬುಲ್ ಸುಪ್ರಿಯೋ ಈ ವೇಳೆ ಹೇಳಿದರು . ನಾನು ಈಗ ಬಿಜೆಪಿ ಪಕ್ಷದ ಭಾಗವಾಗಿಲ್ಲ, ಹೀಗಾಗಿ ಪಕ್ಷದಿಂದ ಆಯ್ಕೆಯಾದ ಸಂಸದ ಸ್ಥಾನವನ್ನು ಉಳಿಸಿಕೊಳ್ಳುವುದು ನೈತಿಕವಾಗಿ ಸರಿ ಅನ್ನಿಸುವುದಿಲ್ಲ. ಹೀಗಾಗಿ ರಾಜೀನಾಮೆ ನೀಡಿದ್ದೇನೆ ಎಂದು ಬಾಬುಲ್ ಸುಪ್ರಿಯೋ ಸ್ಪಷ್ಟಪಡಿಸಿದರು
ಪಶ್ಚಿಮ ಬಂಗಾಳ ವಿಧಾನಸಭೆ ಚುನಾವನೆ ಬಳಿಕ ನಡೆದ ಕೇಂದ್ರ ಸಂಪುಟ ಪುನರ್ ರಚನೆಯಲ್ಲಿ, ಬಾಬುಲ್ ಸುಪ್ರಿಯೋ ಅವರನ್ನು ಕೇಂದ್ರ ಸಚಿವ ಸ್ಥಾನದಿಂದ ಕೈಬಿಡಲಾಗಿತ್ತು. ಇದರಿಂದ ನೊಂದಿದ್ದ ಬಾಬುಲ್ ಸುಪ್ರಿಯೋ, ಬಿಜೆಪಿ ತೊರೆದು ಟಿಎಂಸಿಗೆ ಸೇರ್ಪಡೆಗೊಂಡಿದ್ದರು.