ಬೆಂಗಳೂರು, ಅ.19 (DaijiworldNews/HR): ಕೇಂದ್ರ ಸರ್ಕಾರವು ಒಂದೇ ದೇಶ, ಒಂದೇ ಭಾಷೆ ನೀತಿಯ ಹಿಂದಿ ಹೇರಿಕೆ ಮಾಡುತ್ತಿದೆ. ಆ ಮೂಲಕ ನಾಡಿನ ಸಾಂಸ್ಕೃತಿಕ ಸೊಗಡಿನ ದನಿಯಾಗಿರುವ ದೂರದರ್ಶನದ ಪ್ರಾದೇಶಿಕ ಕೇಂದ್ರಗಳಿಗೆ ಬೀಗ ಜಡಿಯುವ ಕೆಲಸಕ್ಕೆ ಕೈ ಹಾಕಿರುವು ಖಂಡನೀಯ ಎಂದು ಎಚ್.ಡಿ. ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು, ಇಂದು ಪತ್ರಿಕೆಯೊಂದರಲ್ಲಿ ಪ್ರಕಟವಾಗಿರುವ ವರದಿ ಮತ್ತು ಸಂಪಾದಕೀಯ ಅತ್ಯಂತ ಕಳವಳಕಾರಿ. ವಿವಿಧತೆಯಲ್ಲಿ ಏಕತೆಯನ್ನು ಮೈದುಂಬಿಕೊಂಡು ಜಗತ್ತಿಗೆ ʼಬಹುತ್ವತೆಯ ಆದರ್ಶʼ ಆಗಿರುವ ಭಾರತದ ಪ್ರಾದೇಶಿಕ ವೈವಿಧ್ಯಮಯ ಅನನ್ಯ ಸಾಂಸ್ಕೃತಿಕ, ಜಾನಪದ ಸಂಪತ್ತಿಗೆ ಕೇಂದ್ರ ಸರಕಾರ ಕೊಳ್ಳಿ ಇಡಲು ಹೊರಟಿದೆ" ಎಂದಿದ್ದಾರೆ.
ಇನ್ನು "ಈಗಾಗಲೇ ಡಿಡಿ, ಆಕಾಶವಾಣಿಯ ಒಂದೊಂದೇ ಪ್ರಾದೇಶಿಕ ಕಾರ್ಯಕ್ರಮ ಸ್ಥಗಿತಗೊಳಿಸಿದ ನಂತರ ಪ್ರಾದೇಶಿಕ ಪ್ರಸಾರ ಕೇಂದ್ರಗಳನ್ನೂ ಮುಚ್ಚುವ ಹುನ್ನಾರ ನಡೆಸಿದೆ. ಅಕ್ಟೋಬರ್ 31ರಿಂದ ಕಲಬುರಗಿ ಪ್ರಾದೇಶಿಕ ಕೇಂದ್ರಕ್ಕೂ ಬೀಗ ಜಡಿಯಲು ಪ್ರಸಾರ ಭಾರತಿ ಹೊರಟಿದೆ. ಇದು ಕನ್ನಡ ವಿರೋಧಿ ನಡೆ, ಪ್ರಾದೇಶಿಕ ಭಾಷೆಗಳಿಗೆ ಚರಮಗೀತೆ ಹಾಡುವ ದಮನ ನೀತಿ" ಎಂದರು.
"ದೇಶ ಭಾಷೆಗಳಲ್ಲಿ ಒಂದಾದ ಹಿಂದಿಯನ್ನೇ ಉಳಿಸಿ ಬೆಳೆಸುವ ಹಾಗೂ ಅದನ್ನೇ ಕನ್ನಡಿಗರ ಮೇಲೆ ಹೇರುವ ಏಕೈಕ ದುರಾಲೋಚನೆಯಿಂದ ಸಾವಿರಾರು ವರ್ಷಗಳ ಘನ ಇತಿಹಾಸವುಳ್ಳ ಅಭಿಜಾತ ಭಾಷೆ ಕನ್ನಡವನ್ನು ಕಡೆಗಣಿಸಿ, ಮೂಲೋತ್ಪಾಟನೆ ಮಾಡಲು ಕೇಂದ್ರ ಸರಕಾರ ಈ ಮೂಲಕ ಹೊಂಚು ಹಾಕಿರುವುದು ಗೊತ್ತಾಗುತ್ತದೆ" ಎಂದಿದ್ದಾರೆ.
ಇನ್ನು "ಯಾವುದೇ ಕಾರಣಕ್ಕೂ ದೂರದರ್ಶನ ಮತ್ತು ಆಕಾಶವಾಣಿಯಲ್ಲಿ ಪ್ರಸಾರ ಆಗುತ್ತಿರುವ ಪ್ರಾದೇಶಿಕ ಕಾರ್ಯಕ್ರಮಗಳು ನಿಲ್ಲಬಾರದು. ಕಲಬುರಗಿ ಸೇರಿ ಯಾವುದೇ ಭಾಗದಲ್ಲಿರುವ ಪ್ರಾದೇಶಿಕ ಪ್ರಸಾರ ಕೇಂದ್ರಗಳನ್ನು ಮುಚ್ಚಬಾರದು ಎನ್ನುವುದು ನನ್ನ ಒತ್ತಾಯವಾಗಿದೆ" ಎಂದು ಹೇಳಿದ್ದಾರೆ.