ತಿರುವನಂತಪುರಂ,ಅ.19 (DaijiworldNews/HR): ಅನಾನಾಸಿನಲ್ಲಿ ಸಿಡಿಮದ್ದು ಇಟ್ಟು ಗರ್ಭಿಣಿ ಆನೆ ಹತ್ಯೆ ಮಾಡಿದ ಪ್ರಕರಣದಲ್ಲಿ ಘಟನೆಯ ಬೆನ್ನಲ್ಲೇ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. ಆದರೆ ಇದೀಗ ಈ ಪ್ರಕರಣದಲ್ಲಿ ಹೊಸ ಬೆಳವಣಿಗೆಯೊಂದು ನಡೆದಿದೆ.
ಆನೆ ಹತ್ಯೆಯಾದ ಒಂದೂವರೆ ವರ್ಷಗಳ ಬಳಿಕ ಎರಡನೇ ಆರೋಪಿ ರಿಯಾಜುದ್ದೀನ್ (38) ಪೊಲೀಸರಿಗೆ ಬಂದು ಶರಣಾಗಿದ್ದಾನೆ.
ಕಾಡು ಹಂದಿಯನ್ನು ಕೊಲ್ಲಲು ರೂಪಿಸಿದ ಬಲೆಗೆ ಆನೆ ಸಿಲುಕಿ ಮೃತಪಟ್ಟಿದ್ದು, ಕೊನೆಗೂ ಘಟನೆಯ ಪಶ್ಚಾತಾಪದಿಂದ ಆರೋಪಿ ಕೇರಳದ ಮುನ್ಸಿಫ್ ಮ್ಯಾಜಿಸ್ಟ್ರೇಟ್ ಕೋರ್ಟ್ ಮುಂದೆ ಅ.16ರಂದು ಶರಣಾಗಿದ್ದಾನೆ. ಈತ 2020 ಜೂನ್ ತಿಂಗಳಿನಿಂದ ನಾಪತ್ತೆಯಾಗಿದ್ದ. ಸುಮಾರು ಒಂದೂವರೆ ವರ್ಷದ ಬಳಿಕ ಕೋರ್ಟ್ಗೆ ಶರಣಾಗಿದ್ದಾನೆ.
ಇನ್ನು ರಿಯಾಜುದ್ದೀನ್ ತಂದೆ ಅಬ್ದುಲ್ ಕರೀಮ್ ಪ್ರಕರಣದ ಮೊದಲ ಆರೋಪಿಯಾಗಿದ್ದು, ಈಗಲೇ ನಾಪತ್ತೆಯಾಗಿದ್ದಾರೆ. ಆರೋಪಿ ರಿಯಾಜುದ್ದೀನ್ನನ್ನು ಅರಣ್ಯ ಇಲಾಖೆ ತಮ್ಮ ಕಸ್ಟಡಿಗೆ ತೆಗೆದುಕೊಂಡಿದೆ.
ಗರ್ಭಿಣಿ ಆನೆಯು ಹಸಿವಿನಿಂದ ಸ್ಫೋಟಕ ತುಂಬಿದ ಅನಾನಾಸು ತಿನ್ನಲು ಯತ್ನಿಸಿದಾಗ, ಸ್ಫೋಟಕ ಬಾಯಲ್ಲೇ ಸಿಡಿದು ಗಂಭೀರವಾಗಿ ಗಾಯಗೊಂಡಿದ್ದ ಆನೆ ಕೆಲ ದಿನಗಳವರೆಗೆ ನರಳಿ ಮೃತಪಟ್ಟಿತ್ತು. ಬಳಿಕ ಅದರ ಅಂತಿಮ ಸಂಸ್ಕಾರವನ್ನು ಅರಣ್ಯ ಇಲಾಖೆ ನೆರವೇರಿಸಿತ್ತು.