ಬೆಂಗಳೂರು, ಅ 19 (DaijiworldNews/MS):ಪ್ರಧಾನ ಮಂತ್ರಿ ನರೇಂದ್ರ ಮೋದಿ ವಿರುದ್ಧ ‘ಹೆಬ್ಬೆಟ್ ಗಿರಾಕಿ’ ಎಂದು ರಾಜ್ಯ ಕಾಂಗ್ರೆಸ್ ಟ್ವೀಟ್ ಮಾಡಿದ್ದು, ಇದು ವಿವಾದಕ್ಕೆ ಕಾರಣವಾಗಿದ್ದು, ಇದೀಗ ಪ್ರಧಾನಿ ವಿರುದ್ದ ಕಾಂಗ್ರೆಸ್ ಅಪ್ರಬುದ್ದ ಪದ ಬಳಕೆಗೆ ವಿಷಾದ ವ್ಯಕ್ತಪಡಿಸಿದೆ.
" ನಮ್ಮ ಹೋರಾಟ ಸದಾ ಜನಪರ, ನೈತಿಕ ಹಾಗೂ ಸೈದ್ಧಾಂತಿಕ ನೆಲೆಗಟ್ಟಿನಲ್ಲಿರುತ್ತದೆ.ತಾವು ಅಧಿಕಾರಕ್ಕೆ ಬಂದರೆ ಅಚ್ಛೇ ದಿನ್ ತರುವುದಾಗಿ ಹೇಳಿದ್ದ ಬಿಜೆಪಿ ಸರ್ಕಾರವನ್ನು ಉತ್ತರದಾಯಿಯನ್ನಾಗಿಸುವುದು ಕಾಂಗ್ರೆಸ್ ಪಕ್ಷದ ಕರ್ತವ್ಯ.ಈ ಪ್ರಯತ್ನದಲ್ಲಿ ಇಂದಿನ ಅಪ್ರಬುದ್ಧ ಪದಬಳಕೆಗೆ ನಾವು ವಿಷಾದ ವ್ಯಕ್ತಪಡಿಸುತ್ತಾ, ಅದನ್ನು ಹಿಂಪಡೆದಿದ್ದೇವೆ" ಎಂದು ರಾಜ್ಯ ಕಾಂಗ್ರೆಸ್ ಘಟಕ ಟ್ವೀಟ್ ಮಾಡಿದೆ.
ಇನ್ನ್ನೊಂದೆಡೆಕೆಪಿಸಿಸಿ ಸಾಮಾಜಿಕ ಜಾಲತಾಣ ವಿಭಾಗದಿಂದ ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಅವಹೇಳನಕಾರಿ ಟ್ವೀಟ್ ಆಗಿರುವುದರ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ವಿಷಾದ ವ್ಯಕ್ತಪಡಿಸಿದ್ದು ತಕ್ಷಣವೇ ಈ ಟ್ವೀಟ್ ತೆಗೆದುಹಾಕಲು ಸೂಚನೆ ನೀಡಲಾಗಿದೆ. ಈ ಅಚಾತುರ್ಯಕ್ಕೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗಿದೆ. ಇಂತಹ ಪ್ರಮಾದವನ್ನು ಕಾಂಗ್ರೆಸ್ ಎಂದಿಗೂ ಸಹಿಸುವುದಿಲ್ಲ ಎಂದು ಡಿ ಕೆ ಶಿವಕುಮಾರ್ ತಿಳಿಸಿದ್ದಾರೆ.
ಟ್ವೀಟ್ ನಲ್ಲಿ ಏನಿತ್ತು?
ಬೆಲೆ ಏರಿಕೆ ಪ್ರಸ್ತಾಪಿಸಿ ನರೇಂದ್ರ ಮೋದಿ ಅವರನ್ನು ಟೀಕಿಸಿರುವ ಕಾಂಗ್ರೆಸ್, ಟೆಲಿಪ್ರಾಂಪ್ಟರ್ ಇಲ್ಲದೆ ಮಾತೇ ಹೊರಡುವುದಿಲ್ಲ. ವಿದೇಶಾಂಗ ವ್ಯವಹಾರಗಳಲ್ಲಿ ಭಾಷಾಂತ ರಕಾರರಿಲ್ಲದೆ ಆಟವೇ ನಡೆಯುವುದಿಲ್ಲ. ಬಟ್ಟೆ ಶೋಕಿ, ಬಿಟ್ಟಿ ಪ್ರಚಾರ, ಸುಳ್ಳಿನ ಭಾಷಣಗಳೇ ಅವರ ಬಂಡವಾಳ. ಇಂಧನ ತೈಲಗಳಲ್ಲಿ ಸರ್ಕಾರದ ಆದಾಯ ಹೆಚ್ಚಿದಂತೆ ಭಾರತದಲ್ಲಿ ಬಡತನವೂ ಹೆಚ್ಚುತ್ತಿದೆ. ಹೆಬ್ಬೆಟ್ ಗಿರಾಕಿ ಮೋದಿ ಸರ್ಕಾರದ ಆದಾಯವನ್ನು ಯಾರ ಜೇಬಿಗೆ ತುಂಬುತ್ತಿದ್ದಾರೆ ಎಂದು ಪ್ರಶ್ನಿಸಲಾಗಿತ್ತು.