ಬೆಂಗಳೂರು, ಅ 19 (DaijiworldNews/MS): ದೀಪಾವಳಿಯ ಹಬ್ಬವನ್ನು ಜಶ್-ಎ-ರಿವಾಜ್ ನ್ನಾಗಿಸಿ ಜಾಹಿರಾತು ಪ್ರಕಟಿಸಿದ್ದರ ವಿರುದ್ಧ ವ್ಯಾಪಕ ಆಕ್ರೋಶ, ಆಕ್ಷೇಪಗಳು ವ್ಯಕ್ತವಾಗುತ್ತಿದ್ದಂತೆ ಹೆಸರಾಂತ ಸಾಂಪ್ರದಾಯಿಕ ವಸ್ತ್ರ ಬ್ರ್ಯಾಂಡ್ ಫ್ಯಾಬ್ ಇಂಡಿಯಾ ತನ್ನ ವಿವಾದಾತ್ಮಕ ಜಾಹಿರಾತು ಹಿಂಪಡೆದುಕೊಂಡಿದೆ.
ಫ್ಯಾಬ್ ಇಂಡಿಯಾ ಸಂಸ್ಥೆ ಅಕ್ಟೋಬರ್ 9ರಂದು ದೀಪಾವಳಿ ಪ್ರಯುಕ್ತದ ಉಡುಗೆ ಸಂಗ್ರಹವನ್ನು ಜಶ್ನ್ ಇ ರಿವಾಜ್ ಹೆಸರಿನಡಿ ಪ್ರಕಟಿಸಿತ್ತು.
ದೀಪಾವಳಿ ಹಬ್ಬವನ್ನು ದೀಪಾವಳಿಯಂತೆ ಪ್ರತಿಬಿಂಬಿಸದೆ, 'ಜಶ್ನ್ ಇ ರಿವಾಜ್' ಎಂದು ಕರೆಯುವ ಮೂಲಕ ಖ್ಯಾತ ವಸ್ತ್ರ ಬ್ರ್ಯಾಂಡ್ ಹಿಂದೂಯೇತರ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತಿರುವುದಾಗಿ ಸಂಸ್ಥೆಯನ್ನು ಟ್ವಿಟರ್ ನಲ್ಲಿ ಬೆಂಗಳೂರು ದಕ್ಷಿಣ ಸಂಸದ, ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ತೇಜಸ್ವಿ ಸೂರ್ಯ ತರಾಟೆಗೆ ತೆಗೆದುಕೊಂಡಿದ್ದರು.
ದೀಪಾವಳಿ ಜಶ್-ಎ-ರಿವಾಜ್ ಅಲ್ಲ. ಈ ರೀತಿಯಲ್ಲಿ ರೂಪದರ್ಶಿಗಳಿಗೆ ಹಿಂದೂಗಳ ಸಾಂಪ್ರದಾಯಿಕ ಉಡುಗೆಗಳನ್ನು ತೊಡಿಸದೇ ಇರುವುದು ಹಿಂದೂಗಳ ಹಬ್ಬವನ್ನು ಉದ್ದೇಶಪೂರ್ವಕ ಬದಲಾಯಿಸುವ ಪ್ರಯತ್ನ ನಡೆಸುವುದು ಕೂಡಲೇ ನಿಲ್ಲಬೇಕಿದೆ. ಈ ರೀತಿಯಾಗಿ ಉದ್ದೇಶಪೂರ್ವಕ ಕೆಲಸಗಳಿಗೆ ಫ್ಯಾಬ್ ಇಂಡಿಯಾ ಆರ್ಥಿಕವಾಗಿ ಬೆಲೆ ತೆರಬೇಕಾಗುತ್ತದೆ ಎಂದು ಎಚ್ಚರಿಸಿದ್ದರು.ಸಂಸದರ ಈ ಟ್ವೀಟ್ ವೈರಲ್ ಆಗತೊಡಗಿ ಹಲವು ಮಂದಿ ರಿಟ್ವೀಟ್ ಮಾಡಿದ್ದರು.
ಧಾರ್ಮಿಕ ಹಬ್ಬಗಳನ್ನು ಸಂಸ್ಥೆಗಳು ಗೌರವಿಸಬೇಕು. ತಮ್ಮ ಅನುಚಿತ ಉತ್ಪನ್ನಗಳ ಮಾರಾಟಕ್ಕಾಗಿ ಧಾರ್ಮಿಕ ಹಬ್ಬಗಳನ್ನು ದುರುಪಯೋಗ ಪಡಿಸಿಕೊಳ್ಳುವ ಪ್ರವೃತ್ತಿ ನಿಲ್ಲಬೇಕು ಎಂದು ತೇಜಸ್ವಿ ಸೂರ್ಯ ಟ್ವೀಟ್ ನ್ನು ಬೆಂಬಲಿಸಿ ಮಣಿಪಾಲ್ ಗ್ಲೋಬಲ್ ಎಜುಕೇಶನ್ ಸಂಸ್ಥೆಯ ಮೋಹನದಾಸ್ ಪೈ ಟ್ವೀಟ್ ಮಾಡಿದ್ದಾರೆ.