ಬೆಂಗಳೂರು, ಅ.18 (DaijiworldNews/PY): "ಈ ದೇಶದ ಅಭ್ಯುದಯಕ್ಕೆ ಪೊಲೀಸರ ತ್ಯಾಗ ಬಹಳ ದೊಡ್ಡದು. ಭಗವ ಬಣ್ಣ ಹಾಕಿದ ತಕ್ಷಣ ನಿಮ್ಮ ಮನದಲ್ಲಿರುವ ಜಾತಿ, ಧರ್ಮದ ಪಾಚಿ ಕದಡಿ ಕೋಲಾಹಲ ಸೃಷ್ಟಿಯಾಗಿದ್ದಕ್ಕೆ ನನಗೆ ಖೇದವಾಗುತ್ತಿದೆ" ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಹೇಳಿದ್ದಾರೆ.
ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅವರು, "ಪೊಲೀಸ್ ಇಲಾಖೆ ಸಿಬ್ಬಂದಿ ವಿಜಯ ದಶಮಿಯ ಹಿಂದಿನ ದಿನ ಆಯುಧ ಪೂಜೆಯ ವೇಳೆ ಹಾಕಿದ ಕೇಸರಿ, ಬಿಳಿಯ ಬಟ್ಟೆಗಳ ವರ್ಣಗಳಲ್ಲೂ ಜಾತಿ, ಧರ್ಮಗಳನ್ನು ಹುಡುಕಿ ಟೀಕಿಸುವ "ವರ್ಣರಂಜಿತ" ರಾಜಕಾರಣಿ ಸಿದ್ದರಾಮಯ್ಯ ಅವರಿಗೆ ಮನಸ್ಸಿನ ಬೇನೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ ಎಂದು ಅನ್ನಿಸುತ್ತದೆ" ಎಂದಿದ್ದಾರೆ.
"ಬಿಳಿ ಬಣ್ಣ ಶಾಂತಿಯ ಸಂಕೇತ. 1947ರಲ್ಲಿ ದೇಶವು ಸ್ವಾತಂತ್ರ್ಯವನ್ನು ಪಡೆದ ನಂತರ, ಕೇಸರಿಯನ್ನು ಭಾರತದ ಬಾವುಟದ ಮೂರು ಬಣ್ಣಗಳಲ್ಲಿ ಒಂದಾಗಿ ಸೇರಿಸಲಾಗಿದೆ. ಕೇಸರಿಯು ಧೈರ್ಯ ಮತ್ತು ತ್ಯಾಗವನ್ನು ಪ್ರತಿನಿಧಿಸುತ್ತದೆ. ಪೊಲೀಸರು ದೇಶ ರಕ್ಷಣೆ ಮಾಡುವಾಗ ತಮ್ಮ ಪ್ರಾಣವನ್ನೇ ತ್ಯಾಗಮಾಡಿದ್ದಾರೆ. ಅವರು ಕೇಸರಿ ಬಟ್ಟೆ ಧರಿಸಿದರೆ ತಪ್ಪೇನಿದೆ?" ಎಂದು ಪ್ರಶ್ನಿಸಿದ್ದಾರೆ.
"ಸಿದ್ದರಾಮಯ್ಯನವರೇ, ಈ ದೇಶದ ಅಭ್ಯುದಯಕ್ಕೆ ಪೊಲೀಸರ ತ್ಯಾಗ ಬಹಳ ದೊಡ್ಡದು. ಭಗವ ಬಣ್ಣ ಹಾಕಿದ ತಕ್ಷಣ ನಿಮ್ಮ ಮನದಲ್ಲಿರುವ ಜಾತಿ, ಧರ್ಮದ ಪಾಚಿ ಕದಡಿ ಕೋಲಾಹಲ ಸೃಷ್ಟಿಯಾಗಿದ್ದಕ್ಕೆ ನನಗೆ ಖೇದವಾಗುತ್ತಿದೆ. ಮೊದಲು ನಿಮ್ಮಲ್ಲಿರುವ ಅಂಧಕಾರದಿಂದ ಹೊರ ಬನ್ನಿ. ಕಾಮಾಲೆ ಕಣ್ಣಿನಿಂದ ಪ್ರಪಂಚ ನೋಡಬೇಡಿ" ಎಂದು ಹೇಳಿದ್ದಾರೆ.
"ನಿಮಗೆ ಕೇಸರಿ ಬಟ್ಟೆ ನಿಷೇಧಿತ ವಸ್ತ್ರವೇ? ನೈಲಾನ್ ಬಟ್ಟೆ ಹಾಕಿದರೆ ನಿಮಗೆ ಚರ್ಮದ ಅಲರ್ಜಿ ಆಗುತ್ತದೆ ಅಂತ ಕೇಳಿದ್ದೆ. ಆದರೆ ಕೇಸರಿ ನೋಡಿದರೂ ನಿಮಗೆ ಅಲರ್ಜಿ ಆಗುತ್ತದೆ ಎಂದು ಈಗ ಗೊತ್ತಾಯ್ತು" ಎಂದು ಲೇವಡಿ ಮಾಡಿದ್ದಾರೆ.
"ನಿಮ್ಮ ನಾಯಕರು ಮೊದಲೆಲ್ಲ ಕುಂಕುಮ ಕಂಡರೆ ಹೆದರುತ್ತಿದ್ದರು. ಈಗ ಹಣೆ ತುಂಬಾ ಕುಂಕುಮ ಹಚ್ಚಿಕೊಂಡು ಉತ್ತರ ಪ್ರದೇಶದ ತುಂಬಾ ಅಡ್ಡಾಡುತ್ತಿದ್ದಾರೆ. ಮುಂದಿನ ದಿನ ಕೇಸರಿ ಬಟ್ಟೆ ಹಾಕಿಕೊಂಡು ಓಡಾಡುವ ಕಾಲ ಬರಬಹುದು. ನಿಮ್ಮ ದೇಹದ ಅಲರ್ಜಿಗೂ, ಮಾನಸಿಕ ಅಲರ್ಜಿಗೂ ಬೇಗ ಚಿಕಿತ್ಸೆ ಪಡೆದುಕೊಳ್ಳಿ" ಎಂದಿದ್ದಾರೆ.