ಬೆಂಗಳೂರು,ಅ.18 (DaijiworldNews/HR): ಅಲ್ಪಸಂಖ್ಯಾತರ ಮೇಲೆ ಪ್ರೀತಿಯಿದ್ದರೆ ಸಿದ್ದರಾಮಯ್ಯನವರು ಜಮೀರ್ ಅಹಮದ್ ಅವರನ್ನೇ ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಲಿ ಎಂದು ಜೆಡಿಎಸ್ ವಕ್ತಾರ ಟಿ.ಎ.ಶರವಣ ಸವಾಲು ಹಾಕಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಐದು ವರ್ಷ ಅಲ್ಪಸಂಖ್ಯಾತರಿಗೆ ಸಿದ್ದರಾಮಯ್ಯನವರು ಏನು ಕೆಲಸ ಮಾಡಿದ್ದಾರೆ? ಅಕ್ಕಿ ಕೊಟ್ಟೆ, ಅ ಭಾಗ್ಯ ಈ ಭಾಗ್ಯ ಅಂತೀರಾ ಅಷ್ಟೇ, ಆದರೆ ಸಿದ್ದರಾಮಯ್ಯ ಅಲ್ಪಸಂಖ್ಯಾತ ನಾಯಕರನ್ನು ಮುಗಿಸಿದ್ದಾರೆ. ಜಮೀರ್ ಅವರನ್ನೂ ಮುಗಿಸುತ್ತಾರೆ ಎಚ್ಚರವಾಗಿ ಇರಿ" ಎಂದರು.
ಇನ್ನು "ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ಗೆ ತಾಕತ್ ಇದ್ದರೆ ಜಮೀರ್ ರನ್ನೇ ಸಿಎಂ ಅಭ್ಯರ್ಥಿ ಎಂದು ಘೋಷಣೆ ಮಾಡಿ. ಅದು ಆಗದಿದ್ದರೇ ಅಲ್ಪಸಂಖ್ಯಾತ ನಾಯಕರನ್ನು ಕೆಪಿಸಿಸಿ ಅಧ್ಯಕ್ಷರನ್ನಾಗಿ ಮಾಡಿ. ನಮ್ಮದು ಸಣ್ಣ ಪಕ್ಷ ನಾವು ಸಿಎಂ ಮಾಡುವುದು ಬಿಡಿ, ನೀವು ಅಲ್ಪಸಂಖ್ಯಾತರಿಗೆ ಸಿಎಂ ಸ್ಥಾನ ಕೊಡಿ" ಎಂದಿದ್ದಾರೆ.