ಬೆಂಗಳೂರು, ಅ.18 (DaijiworldNews/PY): "ಬಿಜೆಪಿ ಹಾಗೂ ಆರ್ಎಸ್ಎಸ್ ವಿರುದ್ದ ಕಿಡಿಕಾರಿರುವ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿಗೆ ಟಾಂಗ್ ನೀಡಿರುವ ಬಿಜೆಪಿ, ಘಾತುಕತನವನು ಬಿಡದೆ ನಿರಂತರ ಗೀತೆಯನೋದಿದೊಡೇನು ಫಲ? ಪುರಂದರ ದಾಸರ ಈ ಪದ್ಯದ ಸಾಲು ಹೆಚ್ಡಿಕೆ ಅವರಿಗೆ ಅಕ್ಷರಶಃ ಅನ್ವಯವಾಗುತ್ತದೆ" ಎಂದಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ರಾಜ್ಯ ಬಿಜೆಪಿ, ಮಾನ್ಯ ಹೆಚ್ ಡಿ ಕುಮಾರಸ್ವಾಮಿ "ಅವರೇ, ತಮಗೆ ಬೇಕಾದ ವ್ಯಕ್ತಿಯ ಕುಟುಂಬದವರಿಗೆ ಎಚ್.ಎನ್.ಕೃಷ್ಣ ಮೂಲಕ ಕ್ಲಾಸ್ ಒನ್ ಅಧಿಕಾರಿ ಹುದ್ದೆ ಕೊಡಿಸಿದ್ದೆ ಎಂಬ ನಿಮ್ಮ ಹೇಳಿಕೆಗೆ ರಾಜ್ಯವೇ ಸಾಕ್ಷಿಯಾಗಿದೆ. ಹಾಗಾದರೆ ಸಂವಿಧಾನಬದ್ಧ ಸ್ವಾಯತ್ತ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡಿದ್ದು ಯಾರು? ಕುಮಾರ ಸ್ವಾಮಿಯೋ ಅಥವಾ ಸಾಮಾಜಿಕ ಸಂಘಟನೆಯೋ?" ಎಂದು ಪ್ರಶ್ನಿಸಿದೆ.
ಸಾಂವಿಧಾನಿಕ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡು ತಮಗೆ ಬೇಕಾದವರಿಗೆ ಸರ್ಕಾರಿ ಹುದ್ದೆ ಕೊಡಿಸಿದ್ದು ಕನ್ನಡಿಗರಿಗೆ ಮಾಡಿದ ಮೋಸವಲ್ಲವೇ? ಇದರಿಂದಲೇ ನಿಮ್ಮ ಸ್ವಜನ "ಪಕ್ಷ"ಪಾತ ಧೋರಣೆ ಅನಾವರಣವಾಗಿದೆ. ಸರ್ಕಾರಿ ಕೆಲಸ ನೀಡುವಲ್ಲಿಯೂ ಅಕ್ರಮ ಮಾಡಿದ ನೀವು ರಾಜ್ಯದ ಜನರಲ್ಲಿ ಬಹಿರಂಗ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದೆ.
ಕುಮಾರಸ್ವಾಮಿ ಅವರೇ, "ವೃದ್ಧನಾರಿ ಪತಿವ್ರತಾ" ಎಂಬ ಮಾತು ಗೊತ್ತೇ ? ನಿಮ್ಮ ಸ್ಥಿತಿಯೂ ಹಾಗಾಗಿದೆ. ಅವಕಾಶ ಸಿಕ್ಕಾಗಲೆಲ್ಲ ಗುಟ್ಟಿನಲ್ಲಿ ತಪ್ಪು ಮಾಡುವುದು ಬಳಿಕ ಗರತಿಯ ಸೋಗು ಹಾಕುವುದು ನಿಮ್ಮ ಹಳೇ ಚಾಳಿ. ಕೆಪಿಎಸ್ಸಿ ಕರ್ಮಕಾಂಡದ ರೂವಾರಿಯಾಗಿರುವ ನೀವು ಈಗ ಊರಿಗೆ ಉಪದೇಶ ಕೊಡುವಂತಾಗಿರುವುದೇ ಕಾಲದ ಚೋದ್ಯ ಎಂದಿದೆ.
"ಘಾತುಕತನವನು ಬಿಡದೆ ನಿರಂತರ ಗೀತೆಯನೋದಿದೊಡೇನು ಫಲ? ಪುರಂದರ ದಾಸರ ಈ ಪದ್ಯದ ಸಾಲು ಹೆಚ್ಡಿಕೆ ಅವರಿಗೆ ಅಕ್ಷರಶಃ ಅನ್ವಯವಾಗುತ್ತದೆ. ನಿಮ್ಮ ತಪ್ಪು, ವೈರುಧ್ಯ, ಸಮಯಸಾಧಕತನವನ್ನು ಅನ್ಯರ ನಿಂದನೆಯ ಮೂಲಕ ಮುಚ್ಚಿಕೊಳ್ಳಲು ಸಾಧ್ಯವೇ? ಕಾಗೆ ಗಂಗಾ ಸ್ನಾನ ಮಾಡಿದರೆ ಬಿಳುಪಾಗುವುದೇ, ಕುಮಾರಸ್ವಾಮಿ?" ಎಂದು ಕೇಳಿದೆ.