ನವದೆಹಲಿ, ಅ.18 (DaijiworldNews/PY): ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಬಗ್ಗೆ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿರುವ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ, "ದರ ಏರಿಕೆಯ ಕಾರಣದಿಂದ ಮಧ್ಯಮವರ್ಗದ ಜನರಿಗೆ ರಸ್ತೆಯಲ್ಲಿ ಸಂಚರಿಸಲು ಕಷ್ಟವಾಗಿದೆ" ಎಂದಿದ್ದಾರೆ.
"ಹವಾಯಿ ಚಪ್ಪಲಿ ಧರಿಸಿರುವವರೂ ವಿಮಾನದಲ್ಲಿ ಪ್ರಯಾಣಿಸುವಂತೆ ಮಾಡುವ ಭರವಸೆ ನೀಡಲಾಗಿತ್ತು. ಆದರೆ, ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಿಂದ ಮಧ್ಯಮ ವರ್ಗದವರಿಗೆ ರಸ್ತೆಯಲ್ಲಿ ಓಡಾಡಲೂ ಕಷ್ಟಕರವಾಗಿದೆ" ಎಂದು ಕಿಡಿಕಾರಿದ್ದಾರೆ.
"ವಿಮಾನಗಳಿಗೆ ಉಪಯೊಗಿಸುವ ಎಟಿಎಫ್ ತೈಲ ದರಕ್ಕಿಂತಲೂ ಪೆಟ್ರೋಲ್ ಹಾಗೂ ಡೀಸೆಲ್ ದರ ಮೂರು ಪಟ್ಟು ಹೆಚ್ಚಳವಾಗಿದೆ" ಎಂದು ಕೇಂದ್ರ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.
ಮಾಧ್ಯಮದ ವರದಿಯೊಂದನ್ನು ಟ್ಯಾಗ್ ಮಾಡಿ ಟ್ವೀಟ್ ಮಾಡಿರುವ ಅವರು, "ಬಿಜೆಪಿ ದುಬಾರಿ ದಿನಗಳನ್ನು ತಂದಿಟ್ಟಿದೆ" ಎಂದು ಲೇವಡಿ ಮಾಡಿದ್ದಾರೆ.