ಕಲಬುರಗಿ, ಅ.18 (DaijiworldNews/PY): "ದೇಶದಲ್ಲಿ ಪೆಟ್ರೋಲ್, ಡೀಸೆಲ್ ದರ ಹೆಚ್ಚಳವಾಗುತ್ತಿದೆ. ನಾವು ಹೇಳಿದ್ರೆ ಜನ, ವಿರೋಧ ಪಕ್ಷದವರು ಹೇಳುತ್ತಾರೆ ಎನ್ನುತ್ತಾರೆ. ಕೆಲವು ಜನ ಇಂತಹ ವಿಕೃತ ಮನಸ್ಸಿನವರೂ ಇದ್ದಾರೆ. ಅವರು 100 ರೂ. ಆದರೂ ಪರವಾಗಿಲ್ಲ ಎನ್ನುತ್ತಾರೆ" ಎಂದು ಕಾಂಗ್ರೆಸ್ನ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಲಬುರಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಈಗ ಪೆಟ್ರೋಲ್ ದರ ನೂರರ ಗಡಿ ದಾಟಿದರೂ ಕೂಡಾ ಕೇಂದ್ರ ಸರ್ಕಾರದ ವಿರುದ್ದ ಯಾರೂ ಮಾತನಾಡುತ್ತಿಲ್ಲ. ಕಚ್ಚಾ ತೈಲ ಬೆಲೆ ಇದ್ದರೂ ಕೂಡಾ ದೇಶದಲ್ಲಿ ಪೆಟ್ರೋಲ್, ಡೀಸೆಲ್ ದರ ನೂರರ ಗಡಿ ದಾಟಿದೆ. ದಿನದಿಂದ ದಿನಕ್ಕೆ ಬೆಲೆ ಏರಿಕೆಯಾಗುತ್ತಲೇ ಇದ್ದು, ಜನ ಸಾಮಾನ್ಯರಿಗೆ ಹೊರೆಯಾಗಿದೆ" ಎಂದಿದ್ದಾರೆ.
ಹಾನಗಲ್, ಸಿಂದಗಿ ಚುನಾವಣೆಯ ಕುರಿತು ಪ್ರತಿಕ್ರಿಯೆ ನೀಡಿದ ಅವರು, "ಮೊದಲ ಬಾರಿಗೆ ಜೆಡಿಎಸ್ ಎರಡು ಕಡೆ ಅಲ್ಪಸಂಖ್ಯಾತ ಅಭ್ಯರ್ಥಿಗಳನ್ನು ಚುನಾವಣೆಗೆ ನಿಲ್ಲಿಸಿದೆ. ಅಲ್ಪಸಂಖ್ಯಾತ ಅಭ್ಯರ್ಥಿಗಳನ್ನು ಹಾಕಿದರೆ ಕಾಂಗ್ರೆಸ್ಗೆ ಹಿನ್ನಡೆ ಎನ್ನುವುದು ತಪ್ಪು. ಈಗ ಜನರು ಜಾಗೃತರಾಗಿರುವುದು ಮುಖ್ಯ. ಸಂವಿಧಾನ ಉಳಿಸಬೇಕು, ಜಾತ್ಯಾತೀತ ಇರಬೇಕು, ಬಿಜೆಪಿಗೆ ತಕ್ಕ ಪಾಠ ಕಲಿಸಬೇಕು" ಎಂದು ಹೇಳಿದ್ದಾರೆ.
ಛತ್ತೀಸ್ಗಢದಲ್ಲಿ ಸಿಎಂ ಬದಲಾವಣೆ ಕುರಿತು ಮಾತನಾಡಿದ ಅವರು, "ಛತ್ತೀಸ್ಗಢದಲ್ಲಿ ಸಿಎಂ ಬದಲಾವಣೆ ಮಾಡುವ ಪ್ರಶ್ನೆಯೇ ಇಲ್ಲ. ದೇಶದಲ್ಲಿ ಪ್ರಥಮ ಬಾರಿಗೆ ದಲಿತ ಸಿಎಂ ಮಾಡಿದ್ದೇವೆ. ಅವರಿಗೆ ಎಲ್ಲರೂ ಸಹಕರಿಸಿ" ಎಂದಿದ್ದಾರೆ.