ಆಲಪ್ಪುಳ, ಅ 18(DaijiworldNews/MS): ಕೇರಳದಲ್ಲಿ ಕಳೆದ ಎರಡು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಜನ ಜೀವನ ಅಸ್ತವ್ಯಸ್ತವಾಗಿದೆ. ಹಲವೆಡೆ ಪ್ರವಾಹ ಸ್ಥಿತಿ ನಿರ್ಮಾಣವಾಗಿದೆ. ಇಂಥ ಪರಿಸ್ಥಿತಿಯ ನದುವೆಯೂ ಆಲಪ್ಪುಳದಲ್ಲಿ ಯುವ ಜೋಡಿಗಳಾದ ಆಕಾಶ್ ಮತ್ತು ಐಶ್ವರ್ಯ ವಿವಾಹವಾಗಿದ್ದಾರೆ. ಪ್ರವಾಹದ ನಡುವೆಯೂ ಮದುವೆಗೆ ಸಾಂಪ್ರದಾಯಿಕ ತಾಮ್ರದ ಅಡುಗೆ ಪಾತ್ರೆಯಲ್ಲಿ ಸುಮಾರು 500 ಮೀಟರ್ ಪ್ರಯಾಣಿಸಿ ಕೊನೆಗೂ ವಿವಾಹದ ಸ್ಥಳ ತಲುಪಿದ್ದಾರೆ.
ಭಾನುವಾರ ಮಧ್ಯಾಹ್ನದವರೆಗೆ ಸುರಿದ ಧಾರಾಕಾರ ಮಳೆಯು ಭಾಗಶಃ ಭಾನುವಾರದವರೆಗೂ ಮುಂದುವರಿದಿದ್ದರಿಂದ, ಆಲಪ್ಪುಳ ಕುಟ್ಟನಾಡ್ ಪ್ರದೇಶವು ತೀವ್ರ ಮಳೆಯಿಂದಾಗಿ ಮುಳುಗಿದೆ, ಈ ಪ್ರದೇಶದ ರಸ್ತೆಗಳು ಸೋಮವಾರ ಸಂಪೂರ್ಣ ಮುಳುಗಿವೆ.
ಆಕಾಶ್ ಮತ್ತು ಐಶ್ವರ್ಯ ಈ ಮೊದಲು ಕುಟುಂಬ ಸಮ್ಮುಖದಲ್ಲಿ ಅಕ್ಟೋಬರ್ 18ರಂದು ತಮ್ಮ ವಿವಾಹ ನಿಗದಿ ಪಡಿಸಿಕೊಂಡಿದ್ದರು. ವಧು ಐಶ್ವರ್ಯ ಮತ್ತು ವರ ರಾಹುಲ್ ಇಬ್ಬರೂ ಒಂದೇ ಪ್ರದೇಶದವರಾಗಿದ್ದು, ಅವರ ವಿವಾಹವನ್ನು ತಕಜಿಯ ಸ್ಥಳೀಯ ದೇವಸ್ಥಾನದಲ್ಲಿ ನಡೆಸಲು ನಿಶ್ಚಯಿಸಿದ್ದರು.
ಸಾಮಾನ್ಯವಾಗಿ ಕೇರಳದಲ್ಲಿ ವಧುವರರು ದೇವಸ್ಥಾನಕ್ಕೆ ಅಥವಾ ಮದುವೆ ಮಂಟಪಕ್ಕೆ ಕಾರಿನಲ್ಲಿ ಬರುತ್ತಾರೆ. ಆದರೆ ಮಳೆಯಿಂದ ವಾಹನದಲ್ಲಿ ಮಂಟಪಕ್ಕೆ ತೆರಳುವುದು ತುಂಬಾ ಕಷ್ಟವಿತ್ತು. ಆ ಕಾರಣಕ್ಕೆ ನೀರಿನಲ್ಲಿ ತೇಲುವ ದೊಡ್ಡ ಪಾತ್ರೆ ಬಳಸಿಕೊಂಡ ಮಂಟಪ ಸೇರಿದ್ದಾರೆ. ಸೋಮವಾರ ಬೆಳಿಗ್ಗೆ ಆಲಪ್ಪುಳ ಸಮೀಪದ ತಕಜಿಯಲ್ಲಿ ಸ್ಥಳೀಯ ದೇವಸ್ಥಾನದಲ್ಲಿ ಮದುವೆ ಸಾಂಗವಾಗಿ ನೆರವೇರಿದೆ. ಮದುವೆಯ ಸಮಯದಲ್ಲಿ ಹತ್ತಿರದ ಸಂಬಂಧಿಗಳು ಮಾತ್ರ ಹಾಜರಿದ್ದರು. ವಿವಾಹದ ಬಳಿಕ ನವ ದಂಪತಿಗಳು ದೇವರಿಗೆ ಪ್ರಾರ್ಥನೆ ಸಲ್ಲಿಸಿದರು.