ಬೆಂಗಳೂರು, ಅ.18 (DaijiworldNews/HR): ಬೆಂಜ್ ಕಾರ್ ನಲ್ಲಿ ಓಡಾಡುವ ಕಾಂಗ್ರೆಸ್ ನಾಯಕರಿಂದ ಅಭಿವೃದ್ಧಿ ಸಾಧ್ಯವೇ ? ಎಂದು ಪ್ರಶ್ನಿಸಿದ್ದ ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿಕೆಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ತಿರುಗೇಟು ನೀಡಿ, ನೀವು ಓಡಾಡಲು ಎತ್ತಿನ ಬಂಡಿ ಇಟ್ಟುಕೊಂಡಿದ್ದೀರಾ ಬಸವರಾಜ ಬೊಮ್ಮಾಯಿಯವರೇ ? ಎಂದು ಪ್ರಶ್ನಿಸಿದ್ದಾರೆ.
ಹಾನಗಲ್ ಉಪಚುನಾವಣಾ ಪ್ರಚಾರಸಭೆಯಲ್ಲಿ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ವಿರುದ್ಧ ಸಿಎಂ ಬೊಮ್ಮಾಯಿ ವಾಗ್ದಾಳಿ ನಡೆಸಿ, ಕಾಂಗ್ರೆಸ್ ನಾಯಕರದ್ದು ಎಂತಹ ನಾಟಕ.. ಒಮ್ಮೆ ಚಕ್ಕಡಿ ಗಾಡಿಯಲ್ಲಿ ಬರುತ್ತಾರೆ, ಮತ್ತೊಮ್ಮೆ ಸೈಕಲ್ ನಲ್ಲಿ ಬರುತ್ತಾರೆ. ಒಬ್ಬರ ಕೈಯಲ್ಲಿ ಬಾರುಕೋಲು, ಮತ್ತೊಬ್ಬರ ಕೈಯಲ್ಲಿ ಹಗ್ಗ. ಇವರೆಲ್ಲ ಬೆಂಜ್ ಕಾರ್ ಗಿರಾಕಿಗಳು. ಚುನಾವಣಾ ಪ್ರಚಾರಕ್ಕೆ ಸಿದ್ದರಾಮಯ್ಯ ಬೆಂಜ್ ಕಾರಿನಲ್ಲಿ ಓಡಾಡುತ್ತಿದ್ದಾರೆ ಎಂದಿದ್ದರು.
ಇನ್ನು ಸಿಎಂ ಹೇಳಿಕೆಗೆ ಟ್ವಿಟರ್ ನಲ್ಲಿ ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ, "ಕಾಂಗ್ರೆಸ್ ನಾಯಕರು ಬೆಂಜ್ ಕಾರಿನಲ್ಲಿ ಓಡಾಡುತ್ತಾರೆ, ಚಕ್ಕಡಿ ಏರಿ ಪ್ರತಿಭಟನೆ ಮಾಡುತ್ತಾರೆ ಎಂದು ಸಿಎಂ ಗೇಲಿ ಮಾಡಿದ್ದಾರೆ. ಹಾಗಾದರೆ ನೀವು ಓಡಾಡಲು ಮನೆಯಲ್ಲಿ ಎತ್ತಿನ ಬಂಡಿ ಇಟ್ಟುಕೊಂಡಿದ್ದೀರಾ?" ಎಂದು ಪ್ರಶ್ನಿಸಿದ್ದಾರೆ.