ಶಿರಸಿ, ಅ.18 (DaijiworldNews/PY): "ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಅವರಿಗೆ ಯಾರನ್ನು ಟೀಕೆ ಮಾಡುತ್ತಿದ್ದೇವೆ ಎಂದು ತಿಳಿದಿಲ್ಲ" ಎಂದು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ ತಿಳಿಸಿದ್ದಾರೆ.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಸಿದ್ದರಾಮಯ್ಯ ಹಾಗೂ ಹೆಚ್ಡಿಕೆ ರಾಜಕೀಯವಾಗಿ ಹತಾಶರಾಗಿದ್ದು, ಆರ್ಎಸ್ಎಸ್ ವಿರುದ್ದ ಸುಮ್ಮನೆ ಟೀಕೆ ಮಾಡುತ್ತಿದ್ದಾರೆ" ಎಂದಿದ್ದಾರೆ.
"ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ಅವರು ಪರಸ್ಪರ ಟೀಕಿಸಿಕೊಳ್ಳುತ್ತಿದ್ದು, ಸಂಘ ಪರಿವಾರದ ಮೇಲೆ ಒಮ್ಮೆಗೆ ಹರಿಹಾಯುತ್ತಾರೆ. ಅವರಿಬ್ಬರೂ ಕೂಡಾ ಗೊಂದಲದಲ್ಲಿ ಇದ್ದಾರೆ ಎನ್ನುವುದು ಇದರಿಂದ ಸಾಬೀತಾಗುತ್ತಿದೆ" ಎಂದು ಹೇಳಿದ್ದಾರೆ.
"ಎಲ್ಲರೂ ವಿಜಯದಶಮಿ ಮುಗಿಯಲಿ ಎಂದು ಕಾಯುತ್ತಿದ್ದೆವು. ಎಲ್ಲ ಸಚಿವರು ಇಂದಿನಿಂದ ಹಾನಗಲ್ ಕ್ಷೇತ್ರದಲ್ಲಿ ಬೀಡು ಬಿಡಲಿದ್ದು, ಅಕ್ಟೋಬರ್ 28ರವರೆಗೆ ಪ್ರಚಾರ ನಡೆಸಲಿದ್ದೇವೆ" ಎಂದು ತಿಳಿಸಿದ್ದಾರೆ.