ಶಿವಮೊಗ್ಗ, ಅ.18 (DaijiworldNews/PY): "ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಅವರು ರಾಮಮಂದಿರ ನಿರ್ಮಾಣಕ್ಕೆ ಹಣ ನೀಡಿದ್ದರೆ ಲೆಕ್ಕ ಕೇಳಲಿ. ಅವರು ಒಂದು ಪೈಸೆಯನ್ನೂ ಕೊಟ್ಟಿಲ್ಲ" ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ ಎಸ್ ಈಶ್ವರಪ್ಪ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ರಾಮಮಂದಿರ ನಿರ್ಮಾಣದ ಕುರಿತು ಲೆಕ್ಕ ಕೇಳಲು ಕುಮಾರಸ್ವಾಮಿ ಯಾರು?. ರಾಮಮಂದಿರ ನಿರ್ಮಾಣಕ್ಕೆ ಒಂದು ರೂಪಾಯಿಯನ್ನೂ ನೀಡದೇ ಪುಗ್ಸಟ್ಟೆ ಲೆಕ್ಕ ಕೇಳುವ ಅಧಿಕಾರ ಅವರಿಗೆ ಇಲ್ಲ" ಎಂದಿದ್ದಾರೆ.
"ರಾಮಮಂದಿರ ನಿರ್ಮಾಣಕ್ಕೆ ಹಣ ನೀಡಿದ್ದರೆ ಅವರಿಗೆ ಲೆಕ್ಕ ಕೇಳುವ ಅಧಿಕಾರ ಇತ್ತು. ಆದರೆ, ಅವರು ಒಂದು ಪೈಸೆಯನ್ನೂ ನೀಡಿಲ್ಲ. ಹಾಗಾಗಿ ಅವರಿಗೆ ಲೆಕ್ಕ ಕೇಳುವ ಅಧಿಕಾರ ಇಲ್ಲ" ಎಂದು ತಿರುಗೇಟು ನೀಡಿದ್ದಾರೆ.
"ಚುನಾವಣೆಯಲ್ಲಿ ಬಿಜೆಪಿ ಸ್ಪರ್ಧಿಗಳು ಸ್ಪರ್ಧಿಸಿದರೆ ಗೆಲ್ಲುತ್ತಾರೋ ಅಥವಾ ಇಲ್ಲವೋ ಎನ್ನುವ ಬಗ್ಗೆ ನಿರೀಕ್ಷಿಸುವ ಪರಿಸ್ಥಿತಿ ಈ ಹಿಂದೆ ಇತ್ತು. ಆದರೆ, ಪ್ರಸ್ತುತ ಆ ಪರಿಸ್ಥಿತಿ ಇಲ್ಲ. ಬಿಜೆಪಿ ಎಂದರೆ ಜಯ ಸಾಧಿಸುವ ಪಕ್ಷ ಎನ್ನುವ ಮಟ್ಟಕ್ಕೆ ಬೆಳೆದಿದೆ. ಬಿಜೆಪಿ ಅಭ್ಯರ್ಥಿಗಳು ಸಿಂದಗಿ ಹಾಗೂ ಹಾನಗಲ್ ಚುನಾವಣೆಯಲ್ಲಿ ಗೆಲ್ಲುತ್ತಾರೆ" ಎಂದಿದ್ದಾರೆ.