ಚಂಡೀಗಢ, ಅ.18 (DaijiworldNews/PY): ಮನೆಯಿಂದ ಓಡಿಹೋಗಿ ವಿವಾಹವಾಗಿದ್ದ ಅಂತರ್ಜಾತಿ ಜೋಡಿಯನ್ನು ಹತ್ಯೆ ಮಾಡಿದ ಘಟನೆ ಪಂಜಾಬ್ನ ಫಜಿಲ್ಕಾ ಜಿಲ್ಲೆಯ ಸಪ್ಪನ್ವಾಲಿ ಗ್ರಾಮದಲ್ಲಿ ನಡೆದಿದೆ.
ಮೃತಪಟ್ಟ ವ್ಯಕ್ತಿಯನ್ನು ರೋಹ್ತಾಶ್ ಕುಮಾರ್ (25) ಹಾಗೂ ಸುಮನ್ ದೇವಿ (23) ಎಂದು ಗುರುತಿಸಲಾಗಿದೆ.
ಹತ್ಯೆಗೀಡಾದ ವ್ಯಕ್ತಿ ಪರಿಶಿಷ್ಟ ಜಾತಿಗೆ ಸೇರಿದವನಾಗಿದ್ದು, ಯುವತಿ ಇತರ ಹಿಂದುಳಿದ ವರ್ಗಕ್ಕೆ ಸೇರಿದವಳು. ಇಬ್ಬರೂ ಕೂಡಾ ಫಾಝಿಲ್ಕಾ ಜಿಲ್ಲೆಯ ಅಬೋಹರ್ನ ಸಪ್ಪನ್ ವಾಲಿ ಗ್ರಾಮದವರಾಗಿದ್ದಾರೆ.
ಯುವತಿಯ ಕುಟುಂಬದವರ ವಿರುದ್ದ ಕೊಲೆ ಪ್ರಕರಣ ದಾಖಲಿಸುವವೆಗೂ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲು ಅವಕಾಶವಿಲ್ಲ ಎಂದು ಯುವಕನ ಕುಟುಂದವರು ಹೇಳಿದ್ದಾರೆ.
ಇಬ್ಬರನ್ನೂ ಯುವಕನ ಸಹೋದರಿಯ ಮನೆಯಿಂದ ಅಪಹರಿಸಲಾಗಿದೆ ಎನ್ನುವ ಮಾಹಿತಿ ನಮಗೆ ಬಂದಿದೆ. ಮೃತ ಯುವಕನ ಬಾವ ನೀಡಿದ ದೂರಿನ ಅನ್ವಯ ಹತ್ಯೆ, ಅಪಹರಣ ಹಾಗೂ ಅಪರಾಧ ಪಿತೂರಿ ಪ್ರಕರಣ ದಾಖಲಿಸಲಾಗಿದೆ ಎಂದು ಮೋಗಾ ಹಿರಿಯ ಪೊಲೀಸ್ ಅಧೀಕ್ಷಕ ಎಸ್ ಎಸ್ ಮಂದ್ ತಿಳಿಸಿದ್ದಾರೆ.
ರೋಹ್ತಾಶ್ ಕುಮಾರ್ ಹಾಗೂ ಸುಮನ್ ವಿವಾಹ ಕುಟುಂಬದವರಿಗೆ ಇಷ್ಟವಿರಲಿಲ್ಲ. ಈ ಕಾರಣದಿಂದ ಜೋಡಿಯು ಚಂಡೀಗಢ ನ್ಯಾಯಾಲಯದಲ್ಲಿ ನೋಂದಣಿ ಮಾಡಿಸಿಕೊಂಡಿದ್ದು. ಅ.1ರಂದು ವಿವಾಹವಾಗಿದ್ದರು. ಬಳಿಕ ಜೋಡಿ ಯುವಕನ ಸಹೋದರಿಯ ಮನೆಗೆ ತೆರಳಿತ್ತು. ಜೋಡಿಯ ಚಲನಚಲಗಳ ಕುರಿತು ಯುವತಿಯ ಕುಟುಂಬದವರಿಗೆ ತಿಳಿದಿತ್ತು ಎನ್ನಲಾಗಿದೆ. ಭಾನುವಾರದಂದು 16 ಮಂದಿಯ ಗುಂಪು ಯುವಕನ ಸಹೋದರಿಯ ಮನೆಗೆ ನುಗ್ಗಿ ದಂಪತಿಯನ್ನು ಅಪಹರಿಸಿತ್ತು.