ಶ್ರೀನಗರ, ಅ.18 (DaijiworldNews/HR): ಕಣಿವೆ ರಾಜ್ಯದಲ್ಲಿ ಉಗ್ರರ ದಾಳಿಯಿಂದಾಗಿ ಸಾವನ್ನಪ್ಪಿದ ಅಮಾಯಕ ನಾಗರಿಕರ ಪ್ರತಿ ಹನಿ ರಕ್ತಕ್ಕೂ ಸೇಡು ತೀರಿಸಿಕೊಳ್ಳಲಾಗುವುದು ಎಂದು ಜಮ್ಮು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಹೇಳಿದ್ದಾರೆ.
ಕುಲ್ಗಾಂನಲ್ಲಿ ಉಗ್ರರು ಬಿಹಾರ ಮೂಲದ ಇಬ್ಬರು ವಲಸೆ ಕಾರ್ಮಿಕರನ್ನು ಗುಂಡಿಕ್ಕಿ ಕೊಂದಿದ್ದು, ಕಾಶ್ಮೀರದ ವಿವಿಧ ಪ್ರದೇಶಗಳಲ್ಲಿ ಉಗ್ರರು ನಡೆಸಿರುವ ದಾಳಿಯಿಂದ ಅಕ್ಟೋಬರ್ನಲ್ಲೇ ಒಟ್ಟು 11 ಮಂದಿ ಮೃತಪಟ್ಟಿದ್ದಾರೆ.
ಈ ಕುರಿತು ಸಿನ್ಹಾ ಮಾತನಾಡಿ, "ಮೃತ ನಾಗರಿಕರಿಗಾಗಿ ನಾನು ನಮನಗಳನ್ನು ಸಲ್ಲಿಸುತ್ತೇನೆ. ಉಗ್ರರನ್ನು ಬೇಟೆಯಾಡಿ ನಾಗರಿಕರ ರಕ್ತದ ಪ್ರತಿ ಹನಿಗೂ ಪ್ರತೀಕಾರ ತೀರಿಸುತ್ತೇವೆ" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನು "ಮುಂದಿನ ತಿಂಗಳು ದೀಪಾವಳಿ ಆಚರಣೆ ವೇಳೆ ಜನರು ಈ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಮತ್ತು ಮಾನವೀಯತೆಯ ವೈರಿಗಳಿಂದ ಪ್ರಾಣ ಕಳೆದುಕೊಂಡ ಯೋಧರಿಗಾಗಿ ಒಂದು ದೀಪ ಬೆಳಗಬೇಕು" ಎಂದು ಕರೆ ನೀಡಿದ್ದಾರೆ.