ಶ್ರೀನಗರ, ಅ.18 (DaijiworldNews/PY): ಜಮ್ಮು-ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸ ಮುಂದುವರಿದಿದ್ದು, ಮತ್ತೆ ಇಬ್ಬರು ಕಾರ್ಮಿಕರನ್ನು ಉಗ್ರರು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.
ಕುಲ್ಗಾಂ ಜಿಲ್ಲೆಯ ವನ್ಪೋಹ್ನಲ್ಲಿ ಭಾನುವಾರ ಭಯೋತ್ಪಾದಕರು ನಾಗರಿಕರ ಮೇಲೆ ಗುಂಡಿನ ದಾಳಿ ನಡೆಸಿದ್ದು, ಓರ್ವ ಕಾರ್ಮಿಕ ಗಾಯಗೊಂಡಿದ್ದ.
"ಶ್ರೀನಗರದಲ್ಲಿ ವ್ಯಾಪಾರಿ ಅರ್ಬಿಂದ್ ಕುಮಾರ್ ಸಾಹ್ ಅವರಿಗೆ ಪಾಯಿಂಟ್-ಬ್ಲಾಂಕ್ ರೇಂಜ್ನಲ್ಲಿ ಗುಂಡಿಕ್ಕಿ ಹತ್ಯೆಗೈಯಲಾಗಿದೆ. ಪುಲ್ವಾಮಾದಲ್ಲಿ ಬಡಗಿ ಸಗೀರ್ ಅಹ್ಮದ್ ಅನ್ನು ಉಗ್ರರು ಗುಂಡು ಹಾರಿಸಿ ಹತ್ಯೆ ಮಾಡಿದ್ದಾರೆ" ಎಂದು ಪೊಲೀಸರು ತಿಳಿಸಿದ್ದಾರೆ.
"ಉಗ್ರರ ದಾಳಿಗೆ ಈವರೆಗೆ 11 ಮಂದಿ ಸಾವನ್ನಪ್ಪಿದ್ದು, ಈ ಪೈಕಿ ಐದು ಮಂದಿ ಇತರ ರಾಜ್ಯಗಳಿಗೆ ಸೇರಿದವರಾಗಿದ್ದಾರೆ. ಕಾಶ್ಮೀರದಿಂದ ಇತರ ರಾಜ್ಯಗಳ ಜನರನ್ನು ಭಯೋತ್ಪಾದಕರು ಓಡಿಸಲು ಇಚ್ಛಿಸುತ್ತಾರೆ ಎನ್ನವುದನ್ನು ಇದು ಸೂಚಿಸುತ್ತದೆ" ಎಂದು ಅಧಿಕಾರಿಯೋರ್ವರು ಹೇಳಿದ್ದಾರೆ.
ಉಗ್ರರ ದಾಳಿಯಲ್ಲಿ ಮೃತಪಟ್ಟವರ ಪೈಕಿ, ಶಿಕ್ಷಕರಾದ ದೀಪಕ್ ಚಂದ್ ಹಾಗೂ ಸುಪುಂದರ್ ಕೌರ್, ಕಾಶ್ಮೀರಿ ಪಂಡಿತ್ ಸಮುದಾಯದ ಸದಸ್ಯ, ಶ್ರೀನಗರದ ಫಾರ್ಮಸಿಯ ಮಾಲೀಕರಾದ ಮಖನ್ ಲಾಲ್ ಬಿಂದ್ರೂ, ಮೊಹಮ್ಮದ್ ಶಾಫಿ ಲೋನ್, ಟ್ಯಾಕ್ಸಿ ಚಾಲಕ ಹಾಗೂ ಬೀದಿ ಆಹಾರ ಮಾರಾಟಗಾರ ವಿರೇಂದ್ರ ಪಾಸ್ವಾನ್ ಸೇರಿದ್ದಾರೆ.