ಸಿರಿಗೆರೆ,ಅ 18(DaijiworldNews/MS): ವಿಷಯುಕ್ತ ರಾಗಿ ಮುದ್ದೆ ಸೇವನೆಯಿಂದ ಜುಲೈ 13ರಂದು ಚಿತ್ರದುರ್ಗ ಜಿಲ್ಲೆಯ ಭರಮಸಾಗರ ಹೋಬಳಿ ಇಸಾಮುದ್ರ ಗೊಲ್ಲರಹಟ್ಟಿಯಲ್ಲಿ ಒಂದೇ ಕುಟುಂಬದ ನಾಲ್ವರು ನಿಗೂಢವಾಗಿ ನಾಲ್ವರು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿ ಆಹಾರದಲ್ಲಿ ವಿಷವಿರುವ ಬಗ್ಗೆ ವಿಧಿ ವಿಜ್ಞಾನ ವರದಿಯಲ್ಲಿ ಬಹಿರಂಗವಾಗಿದೆ. ಮಾತ್ರವಲ್ಲದೆ ಈ ನಿಗೂಢ ಸಾವಿನ ರಹಸ್ಯವನ್ನು ಪೊಲೀಸರು ಭೇದಿಸಿದ್ದು ಮನೆಯ ಮಗಳೇ ಮುದ್ದೆಗೆ ವಿಷ ಬೆರೆಸಿರುವುದು ತನಿಖೆಯಿಂದ ತಿಳಿದುಬಂದಿದೆ.
ಮನೆಯಲ್ಲಿ ಬಡತನವಿದ್ದುದರಿಂದ ತನ್ನನ್ನು ಕೂಲಿ ಕೆಲಸಕ್ಕೆ ಹೋಗುವಂತೆ ಒತ್ತಾಯಿಸುವುದು, ವಿನಾ ಕಾರಣ ಬಯ್ಯುತ್ತಿದ್ದರು. ಇದೇ ಕಾರಣಕ್ಕೆ ವಿಷ ಬೆರೆಸಿದ್ದಾಗಿ ಹಿರಿಯ ಮಗಳು 17 ವರ್ಷದ ಅಪ್ರಾಪ್ತೆ ರಕ್ಷಿತಾ ಒಪ್ಪಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಪ್ರಕರಣದಲ್ಲಿ ಒಂದೇ ಕುಟುಂಬದ ತಿಪ್ಪಾ ನಾಯ್ಕ (45), ಸುಧಾಬಾಯಿ (40), ರಮ್ಯಾ (16) ಹಾಗೂ ಗುಂಡಿಬಾಯಿ (80) ಮೃತಪಟ್ಟಿದ್ದರು. ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಮಗ ರಾಹುಲ್ (18) ಚೇತರಿಸಿಕೊಂಡಿದ್ದರು.
ಅಂದು ಕೂಲಿ ಕೆಲಸ ಮುಗಿಸಿಕೊಂಡು ಮನೆಗೆ ಬಂದ ತಾಯಿ ಅಡುಗೆ ಮಾಡಲು ತಾಯಿ ಎಲ್ಲ ಸಿದ್ಧತೆ ಮಾಡಿಕೊಂಡಿದ್ದಳು. ಅದೇ ಸಮಯಕ್ಕೆ ಕರೆಂಟ್ ಹೋಯಿತು. ಮುದ್ದೆ ತಿಂದ ಬಳಿಕ ನಾಲ್ವರು ಮೃತಪಟ್ಟು ರಾಹುಲ್ ಜೀವನ್ಮರಣ ಹೋರಾಟ ನಡೆಸಿ ಆಸ್ಪತ್ರೆಯಲ್ಲಿ ಚೇತರಿಸಿಕೊಂಡಿದ್ದರು. ಈ ಸಮಯದಲ್ಲಿ ಮುದ್ದೆ ಪಾತ್ರೆಗೆ ಯಾರೋ ವಿಷ ಬೆರೆಸಿರುವುದು ತಿಳಿದಿತ್ತು. ಅಡುಗೆಗೆ ಬಳಸಿದ್ದ ಪಾತ್ರೆ ಆಹಾರ ಪದಾರ್ಥಗಳನ್ನು ವಿಧಿ ವಿಜ್ಞಾನ ಸಂಸ್ಥೆಗೆ ರವಾನಿಸಿದ್ದರು. ಕುಟುಂಬಸ್ಥರ ಸಾವಿಗೆ ಕಾರಣರಾದವರನ್ನು ಪತ್ತೆ ಹಚ್ಚಬೇಕು ಎಂದು ರಾಹುಲ್ ಪೊಲೀಸರಿಗೆ ದೂರು ನೀಡಿದ್ದರು.
ಸುಳಿವು ಕೊಟ್ಟ ಅನ್ನ-ಸಾರು:
ಮನೆಯಲ್ಲಿ ಎಲ್ಲರೂ ಎಲ್ಲರೂ ಅಂದು ಮುದ್ದೆ ಊಟ ಮಾಡಿದ್ದರೆ, 17 ವರ್ಷದ ಹಿರಿಯ ಮಗಳು ತನಗೆ ಮಾತ್ರ ಮುದ್ದೆ ಬೇಡ ಎಂದು ಅನ್ನ ಸಾರು ಉಂಡಿದ್ದಳು. ಈ ಮಾಹಿತಿ ಪೊಲೀಸರಿಗೆ ಸಿಕ್ಕ ಕೂಡಲೇ ಆಕೆಯನ್ನು ತೀವ್ರವಾಗಿ ವಿಚಾರಣೆ ನಡೆಸಿದಾಗ ತಾನೇ ವಿಷ ಇಕ್ಕಿರುವುದಾಗಿ ಆಕೆ ಒಪ್ಪಿಕೊಂಡಿದ್ದಾಳೆ.