ಬೆಂಗಳೂರು, ಅ.18 (DaijiworldNews/PY): "2023ರ ರಾಜ್ಯ ವಿಧಾನಸಭೆ ಚುನಾವಣೆ ಪೂರ್ಣಗೊಂಡ ನಂತರ ಮುಖ್ಯಮಂತ್ರಿಗಳ ಆಯ್ಕೆ ನಡೆಯಲಿದ್ದು, ಕಾಂಗ್ರೆಸ್ನ ಉನ್ನತ ನಾಯಕರು ಆಯ್ಕೆ ಮಾಡಲಿದ್ದಾರೆ" ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಹೈಕಮಾಂಡ್ ಮುಖ್ಯಮಂತ್ರಿಗಳ ಬಗ್ಗೆ ತೀರ್ಮಾನ ಕೈಗೊಳ್ಳಲಿದೆ. ಅವರು ಯಾರನ್ನೇ ಸೂಚಿಸಿದರೂ ತೀರ್ಮಾನಕ್ಕೆ ಎಲ್ಲರೂ ಬದ್ದ" ಎಂದಿದ್ದಾರೆ.
"ಬಸವರಾಜ ಬೊಮ್ಮಾಯಿ ಅವರನ್ನು ಯಾರು ಸಿಎಂ ಆಗಿ ಮಾಡಿದರು? ಶಾಸಕರೇ? ಬಿಜೆಪಿ ಹೈಕಮಾಂಡ್ ಹಾಗೂ ಆರ್ಎಸ್ಎಸ್ ಮಾಡಿದ್ದು. ಹಾಗೆಯೇ ಕಾಂಗ್ರೆಸ್ನಲ್ಲೂ ಹೈಕಮಾಂಡ್ ಇದೆ" ಎಂದು ತಿಳಿಸಿದ್ದಾರೆ.
ರಾಷ್ಟ್ರೀಯ ರಾಜಕಾರಣಕ್ಕೆ ಹೈಕಮಾಂಡ್ ಆಹ್ವಾನ ನೀಡಿದೆ ಎನ್ನುವ ಊಹಾಪೋಹಗಳ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, "ಈ ಬಗ್ಗೆ ಸೋನಿಯಾ ಗಾಂಧಿ ಅವರ ಬೇಟಿಯ ಸಂದರ್ಭ ಚರ್ಚಿಸಿಯೇ ಇಲ್ಲ. ಈಗ ನನಗೆ 74 ವರ್ಷ ವಯಸ್ಸಾಗಿದ್ದು, ಗರಿಷ್ಠ ಎಂದರೆ ಐದು ವರ್ಷ ರಾಜಕೀಯದಲ್ಲಿರಬಹುದು" ಎಂದಿದ್ದಾರೆ.
ರಾಹುಲ್ ಗಾಂಧಿ ಬಗ್ಗೆ ಮಾತನಾಡಿದ ಅವರು, "ರಾಹುಲ್ ಗಾಂಧಿ ಅವರೇ ಪಕ್ಷದ ಅಧ್ಯಕ್ಷರಾಗಬೇಕು. ಈ ವಿಚಾರವಾಗಿ ಹಲವಾರು ಬಾರಿ ಮಾತನಾಡಿದ್ದೇನೆ" ಎಂದು ಹೇಳಿದ್ದಾರೆ.