ಹಾವೇರಿ, ಅ.17 (DaijiworldNews/HR): ಬೆಂಜ್ ಕಾರ್ ಗಿರಾಕಿಗಳಿಂದ ಅಭಿವೃದ್ಧಿ ಸಾಧ್ಯವೇ? ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಸಿದ್ದರಾಮಯ್ಯ ಮತ್ತು ಡಿಕೆಶಿಯವರದ್ದು ಅದೆಂಥ ನಾಟಕ? ಒಮ್ಮೆ ಸೈಕಲ್ ನಲ್ಲಿ ಬರುತ್ತಾರೆ, ಮತ್ತೊಮ್ಮೆ ಎತ್ತಿನ ಗಾಡಿಯಲ್ಲಿ ಬರುತ್ತಾರೆ. ಒಬ್ಬರ ಕೈಯಲ್ಲಿ ಬಾರುಕೋಲು, ಮತ್ತೊಬ್ಬರ ಕೈಯಲ್ಲಿ ಹಗ್ಗ. ನಿನ್ನೆ ಸಿದ್ದರಾಮಯ್ಯ ಬೆಂಜ್ ಕಾರಿನಲ್ಲಿ ಪ್ರಚಾರಕ್ಕೆ ಬಂದಿದ್ದಾರೆ. ಬೆಂಜ್ ಕಾರಿನಲ್ಲಿ ಓಡಾಡುವ ನಾಯಕರಿಂದ ಅಭಿವೃದ್ಧಿ ಸಾಧ್ಯವೇ" ಎಂದು ಪ್ರಶ್ನಿಸಿದ್ದಾರೆ.
ಇನ್ನು "ನಮ್ಮ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡುತ್ತಿದ್ದಾರೆ. ಯಾರ ವಿರುದ್ಧ ಕಾಂಗ್ರೆಸ್ ಆರೋಪಗಳನ್ನು ಮಾಡಲ್ಲ? ಕಾಂಗ್ರೆಸ್ ಪಕ್ಷ ಭ್ರಷ್ಟಾಚಾರದ ಗಂಗೋತ್ರಿ ಇದ್ದಂತೆ. ಕಾಂಗ್ರೆಸ್ ನವರಿಗೆ ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕ ಹಕ್ಕಿಲ್ಲ. ಸಿದ್ದರಾಮಯ್ಯನವರಿಗೆ ಕಾಂಗ್ರೆಸ್ ನಲ್ಲಿ ಅಚ್ಚೇ ದಿನ್ ಬರಲ್ಲ" ಎಂದರು.
ಬಿಜೆಪಿಯಲ್ಲಿ ಯಾವುದೇ ಸಮುದಾಯಕ್ಕೆ ಅನ್ಯಾಯವಾಗಲು ಬಿಡಲ್ಲ, ಎಲ್ಲರಿಗೂ ನ್ಯಾಯ ಕೊಡಿಸುವ ಕೆಲಸ ಮಾಡುತ್ತೇನೆ. ಸಿ.ಎಂ.ಉದಾಸಿ ನಾಲ್ಕು ದಶಕಗಳ ಕಾಲ ಹಾನಗಲ್ ಪ್ರತಿನಿಧಿಸಿದ್ದರು. ಅವರಿಗೆ ಸಾಟಿ ಬೇರೆ ಯಾರೂ ಇಲ್ಲ. ಕಾಂಗ್ರೆಸ್ ಅಭ್ಯರ್ಥಿ ಈ ಕ್ಷೇತ್ರವನ್ನೂ ಪೂರ್ಣವಾಗಿ ನೋಡಿಲ್ಲ, ನಿನ್ನೆ ಮೊನ್ನೆ ಬಂದು ದೊಡ್ಡ ಸಾಧನೆ ಮಾಡಿದಂತೆ ಹೇಳುತ್ತಿದ್ದಾರೆ" ಎಂದು ವಾಗ್ದಾಳಿ ನಡೆಸಿದ್ದಾರೆ.