ಬೆಂಗಳೂರು, ಅ.17 (DaijiworldNews/PY): ಆರ್ಎಸ್ಎಸ್ ಹಾಗೂ ಅದರ ಸಮಾಜಮುಖಿ ಕಾರ್ಯವನ್ನು ಟೀಕೆ ಮಾಡಿದ್ದ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಅವರಿಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ತಿರುಗೇಟು ನೀಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಆರ್ಎಸ್ಎಸ್ ಮಾಡುವ ಸಮಾಜಮುಖಿ ಕಾರ್ಯವನ್ನು ಟೀಕಿಸುವ ಅನೇಕರಿಗೆ ಮುಖ ನೋಡುವ ಕನ್ನಡಿ ಇಲ್ಲಿದೆ. ರಾಷ್ಟ್ರೋತ್ತಾನ ಪರಿಷತ್ ಬಡ ವಿದ್ಯಾರ್ಥಿಗಳ ಪಾಲಿನ ದೀವಿಗೆ. ಎಸ್ಎಸ್ಎಲ್ಸಿ ಪರೀಕ್ಷೆ ನಂತರ ಗ್ರಾಮೀಣ ಬಡ ವಿದ್ಯಾರ್ಥಿಗಳನ್ನು ಗುರುತಿಸಿ "ತಪಸ್" ಯೋಜನೆ ಅಡಿ ಪರೀಕ್ಷೆಗೆ ತರಬೇತಿ ಪಡೆದ 9 ವಿದ್ಯಾರ್ಥಿಗಳು ಪ್ರತಿಷ್ಟಿತ ಐಐಟಿ ನಲ್ಲಿ ಪ್ರವೇಶ ಪಡೆದ್ದಿದ್ದಾರೆ ಎಂದು ತಿಳಿಸಿದ್ದಾರೆ.
"ರಾಮನಗರ ಜಿಲ್ಲೆಯ ಕನಕಪುರದ ಗೋಗೆರೆದೊಡ್ಡಿಯ ಯಶವಂತ್ಗೌಡ ರಾಷ್ಟ್ರೋತ್ತಾನ ಪರಿಷತ್ನಲ್ಲಿ ಉಚಿತ ತರಬೇತಿ ಪಡೆದು ಐಐಟಿ ಪ್ರವೇಶಿಸಿ ಸಾಧನೆ ಮಾಡಿದ್ದಾರೆ. ಆರ್ಎಸ್ಎಸ್ ಬಗ್ಗೆ ಟೀಕೆ ಮಾಡುತ್ತಾ ಜನರ ಮೂಗಿಗೆ ತುಪ್ಪಸವರುತ್ತಾ ತಮ್ಮ ಬೇಳೆ ಬೇಯಿಸಿಕೊಳ್ಳಲು ಹರಸಾಹಸ ಪಡುತ್ತಿರುವ ನಾಯಕರೊಬ್ಬರು ಆರ್ಎಸ್ಎಸ್ ನಿಂದಿಸುವ ಮುನ್ನ ಕಣ್ಣುತೆರೆದು ನೋಡಿದರೆ ಒಳ್ಳೆಯದು" ಎಂದಿದ್ದಾರೆ.
"ಬಡ ವಿದ್ಯಾರ್ಥಿಗಳನ್ನು ಗುರುತಿಸಿ ಪ್ರತಿಭೆಗಳಿಗೆ ತಕ್ಕ ಮನ್ನಣೆಯನ್ನು ರಾಷ್ಟ್ರೋತ್ತಾನ ಪರಿಷತ್ ನೀಡುತ್ತಿದೆ. ಐಐಟಿ ಪ್ರವೇಶ ಪಡೆಯಲು ಲಕ್ಷಗಟ್ಟಲೆ ಖರ್ಚು ಮಾಡಬೇಕು. ಆರ್ಎಸ್ಎಸ್ ಅಂಗವಾದ ರಾಷ್ಟೋತ್ತಾನ ಪರಿಷತ್ ವಿದ್ಯಾರ್ಥಿಗಳ ಪಾಲಿಗೆ ಕಾಮಧೇನುವಾಗಿದೆ. ಪೊರೆ ಬಂದ ಕಣ್ಣುಗಳಿಂದ ಆರ್ಎಸ್ಎಸ್ ನೋಡುವ ನಾಯಕರು ಈ ಸುದ್ದಿ ಓದಲು ಕಣ್ಣು ಸರಿ ಮಾಡಿಕೊಳ್ಳಲಿ" ಎಂದು ಹೇಳಿದ್ದಾರೆ.