ಹುಬ್ಬಳ್ಳಿ, ಅ.17 (DaijiworldNews/HR): ಮೈತ್ರಿ ಸರಕಾದಲ್ಲಿ ಕುಮಾರಸ್ವಾಮಿ ಅಲ್ಪಸಂಖ್ಯಾತ ಸಮುದಾಯಕ್ಕೆ ಎಷ್ಟು ಅನ್ಯಾಯ ಮಾಡಿದ್ದಾರೆ ಎಂಬುವುದು ಗೊತ್ತಿದೆ. ಅವರ ಸಚಿವ ಸಂಪುಟದಲ್ಲಿ ಒಬ್ಬರಿಗೂ ಅವಕಾಶ ಕೊಡಲಿಲ್ಲ. ಸಿದ್ದರಾಮಯ್ಯ ಅವರು ನಾಲ್ವರಿಗೆ ಅವಕಾಶ ನೀಡಿದ್ದರು ಎಂದು ಕಾಂಗ್ರೆಸ್ ಹೇಳಿದೆ.
ಸಿದ್ದರಾಮಯ್ಯ ಅವರಿಂದ ಅಲ್ಪಸಂಖ್ಯಾತ ನಾಯಕರಿಗೆ ಅನ್ಯಾಯವಾಗಿದೆ ಎಂದಿರುವ ಎಚ್.ಡಿ.ಕುಮಾರಸ್ವಾಮಿ ಅವರ ಟ್ವೀಟ್ ಗೆ ಮಾಜಿ ಸಚಿವ ಯು.ಟಿ.ಖಾದರ್, ವಿಧಾನ ಪರಿಷತ್ ಸದಸ್ಯ ನಾಸೀರ್ ಅಹ್ಮದ್, ಮತ್ತು ಶಾಸಕ ರಿಜ್ವಾನ್ ಅರ್ಷದ್ ಭಾನುವಾರ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಾಸೀರ ಅಹ್ಮದ್, "ಕೇಂದ್ರದ ಮಾಜಿ ಸಚಿವ ಜಾಫರ್ ಷರೀಫ್ ಮೊಮ್ಮಗನನ್ನು ಸೋಲಿಸಿದ್ದು ಇದೇ ಕುಮಾರಸ್ವಾಮಿ. ಆ ಸಂದರ್ಭದಲ್ಲಿ ತಮ್ಮ ಪಕ್ಷದಿಂದ ನಿವೃತ್ತ ಪೊಲೀಸ್ ಅಧಿಕಾರಿ ಅಸಿಂ ಎಂಬುವರನ್ನು ಕಣಕ್ಕಿಳಿಸಿದರು. ನಂತರದ ಉಪ ಚುನಾವಣೆಯಲ್ಲೂ ನಾನಾ ಎನ್ನುವ ಅಲ್ಪಸಂಖ್ಯಾತ ವ್ಯಕ್ತಿಯನ್ನು ಕಣಕ್ಕಿಳಿಸಿ ಬಿಜೆಪಿಗೆ ನೆರವು ನೀಡಿ ಜಾಫರ್ ಷರೀಫ್ ಅವರ ಮೊಮ್ಮಗನನ್ನು ಸೋಲಿಸಿದರು" ಎಂದರು.
ಇನ್ನು "ಅಲ್ಪಸಂಖ್ಯಾತ ಸಮುದಾಯದ ಅಭಿವೃದ್ಧಿಗೆ ನೀಡುತ್ತಿದ್ದ ಅನುದಾನವನ್ನು 3200 ಕೋಟಿ ರೂ. ನಿಂದ 1800 ಕೋಟಿ ರೂ.ಗೆ ಇಳಿಸಿದರು. ಇದನ್ನು ಅಲ್ಪಸಂಖ್ಯಾತ ಮುಖಂಡರು ಕೇಳಿದರೆ ಆಗಿರುವ ತಪ್ಪನ್ನು ಸರಿಪಡಿಸುವ ಭರವಸೆ ನೀಡಿ ವಂಚನೆ ಮಾಡಿದರು. ಈಗ ಅಲ್ಪಸಂಖ್ಯಾತರ ಕಾಳಜಿ ವ್ಯಕ್ತಪಡಿಸುತ್ತಿರುವ ಕಾಳಜಿ ಹಾನಗಲ್ಲ ಹಾಗೂ ಸಿಂದಗಿ ಕ್ಷೇತ್ರದಲ್ಲಿ ಅವರಿಗೆ ಫಲ ನೀಡುವುದಿಲ್ಲ" ಎಂದಿದ್ದಾರೆ.
ಮಾಜಿ ಸಚಿವ ಯು.ಟಿ.ಖಾದರ್ ಮಾತನಾಡಿ, "ವಿರೋಧ ಪಕ್ಷವೊಂದು ವಿರೋಧ ಪಕ್ಷವನ್ನು ಟೀಕೆ ಮಾಡುತ್ತಿರುವುದು ದೇಶದಲ್ಲಿ ಇತಿಹಾಸದಲ್ಲಿ ಕರ್ನಾಟಕದಲ್ಲಿ ಮಾತ್ರ. ಸಿದ್ದರಾಮಯ್ಯ ಅವರ ನೇತೃತ್ವದ ಸರಕಾರ ಸರ್ವ ಜನಾಂಗದ ಅಭಿವೃದ್ಧಿಗೆ ಶ್ರಮಿಸಿತು. ಅಂತಹ ಕಾರ್ಯಗಳು ಇಂದಿನ ಸರಕಾರದಲ್ಲಿ ಆಗುತ್ತಿಲ್ಲ. ಇದನ್ನು ಪ್ರಶ್ನಿಸುವ, ಟೀಕಿಸುವ ಕೆಲಸ ಕುಮಾರಸ್ವಾಮಿ ಮಾಡುತ್ತಿಲ್ಲ" ಎಂದು ಹೇಳಿದ್ದಾರೆ.