ಬೆಂಗಳೂರು, ಅ.17 (DaijiworldNews/HR): ಭ್ರಷ್ಟಾತಿ ಭ್ರಷ್ಟ ಎಂಎಂಕೆ! ಹಲವು ದಶಕಗಳಿಂದ ಕಲ್ಯಾಣ ಕರ್ನಾಟಕವನ್ನು ಲೂಟಿ ಮಾಡಿದ ಭ್ರಷ್ಟ ಕಾಂಗ್ರೆಸ್ಸಿಗನ ಸಂಕ್ಷಿಪ್ತ ಹೆಸರಿದು. ಮಲ್ಲಿಕಾರ್ಜುನ ಖರ್ಗೆ ಅವರ ಸಂಪತ್ತಿನ ಲೆಕ್ಕವನ್ನು ಜನರ ಮುಂದಿಡಲು ಕಾಂಗ್ರೆಸ್ ಪಕ್ಷಕ್ಕೆ ಸಾಧ್ಯವೇ? ಖರ್ಗೆಯ ಭ್ರಷ್ಟ ಸಂಪತ್ತಿನ ಮುಂದೆ ಮಿಕ್ಕವರೆಲ್ಲ ಲೆಕ್ಕಕ್ಕಿಲ್ಲ ಎಂದು ಬಿಜೆಪಿ ಆರೋಪಿಸಿದೆ.
ಈ ಕುರಿತು ಸರಣಿ ಟ್ವೀಟ್ ಮಾಡಿರುವ ಬಿಜೆಪಿ ಕರ್ನಾಟಕ, "ಕುಟುಂಬದ ಹೆಸರಿನಲ್ಲಿ ದೇಶವನ್ನು ಕೊಳ್ಳೆ ಹೊಡೆದ ನಕಲಿ ಗಾಂಧಿ ಕುಟುಂಬದ ಆಸ್ತಿ ಎಷ್ಟೆಂದು ಯಾರಿಗಾದರೂ ಗೊತ್ತೇ? ಅದರಲ್ಲಿ ಬೇನಾಮಿ ಎಷ್ಟೆಂದು ಲೆಕ್ಕ ಹಾಕಿ ಹೇಳಲು ಸಾಧ್ಯವೇ ಕಾಂಗ್ರೆಸ್? ಕಾಂಗ್ರೆಸ್ ಮಾಡಿದ ಭ್ರಷ್ಟಾಚಾರ ಪ್ರಕರಣಗಳಲ್ಲಿ ಸೋನಿಯಾ ಗಾಂಧಿಯವರಿಗೆ ಪಾಲೆಷ್ಟು?" ಎಂದು ಪ್ರಶ್ನಿಸಿದೆ.
ಇನ್ನು "ಕಾಂಗ್ರೆಸ್ಸಿಗರ ಭ್ರಷ್ಟಾಚಾರ ಎಲ್ಲಿಯವರೆಗೆ ತಲುಪಿತ್ತು ಎಂದರೆ ಸ್ವತಃ ಪಕ್ಷದ ಆಸ್ತಿಯನ್ನೇ ನಕಲಿ ಗಾಂಧಿ ಕುಟುಂಬ ಕಬಳಿಸಿದೆ. ನ್ಯಾಶನಲ್ ಹೆರಾಲ್ಡ್ ಪ್ರಕರಣದಲ್ಲಿ ತಿಹಾರ್ ಯಾತ್ರೆ ಮಾಡುವ ಎಲ್ಲಾ ಲಕ್ಷಣಗಳಿವೆ. ಜಾಮೀನಿನ ಮೂಲಕ ನಕಲಿ ಗಾಂಧಿ ಕುಟುಂಬ ಜೈಲು ವಾಸವನ್ನು ತಪ್ಪಿಸಿಕೊಂಡಿದೆ ಅಷ್ಟೇ." ಎಂದಿದೆ.
"ಕೆಪಿಸಿಸಿ ರಾಜ್ಯಾಧ್ಯಕ್ಷರು ಈಗ ಭ್ರಷ್ಟಾಧ್ಯಕ್ಷ ಎಂದೇ ಕುಖ್ಯಾತರಾಗಿದ್ದಾರೆ. ಅಕ್ರಮ ಸಂಪಾದನೆ ಹಾಗೂ ಅಕ್ರಮ ಹಣ ವರ್ಗಾವಣೆಯ ಪ್ರಕರಣದಲ್ಲಿ ತಿಹಾರ್ ಯಾತ್ರೆ ಮುಗಿಸಿ ಈಗ ಜಾಮೀನಿನ ಮೇಲೆ ಹೊರಗಿದ್ದಾರೆ. ಪಕ್ಷದ ಕಚೇರಿಗೆ ಭೇಟಿ ನೀಡುವುದಕ್ಕಿಂತ ಡಿ.ಕೆ ಶಿವಕುಮಾರ್ ಅವರು ಹೆಚ್ಚಾಗಿ ಕೋರ್ಟಿಗೆ ಅಲೆದಾಡುತ್ತಿದ್ದಾರೆ" ಎಂದು ಹೇಳಿದೆ.