ಬೆಂಗಳೂರು, ಅ.17 (DaijiworldNews/PY): "ಜನರಿಂದ ನಿರಂತರ ಎರಡನೇ ಅವಧಿಗೆ ಆಯ್ಕೆಯಾದ ಪ್ರಧಾನ ಸೇವಕ ಅಲಂಕರಿಸಿರುವ ಪ್ರಧಾನಿ ಹುದ್ದೆಯ ಕುರಿತು ಕೀಳು ಮಟ್ಟದಲ್ಲಿ ಮಾತನಾಡಿ ನಿಮ್ಮ ಕೀಳು ಸಂಸ್ಕಾರ ಅನಾವರಣ ಮಾಡಿಕೊಂಡಿದ್ದೀರಿ" ಎಂದು ರಾಜ್ಯ ಬಿಜೆಪಿ ಟೀಕಿಸಿದೆ.
ಈ ಕುರಿತು ಟ್ವೀಟ್ ಮಾಡಿರುವ ಬಿಜೆಪಿ, "ಜನರಿಂದ ನಿರಂತರ ಎರಡನೇ ಅವಧಿಗೆ ಆಯ್ಕೆಯಾದ ಪ್ರಧಾನ ಸೇವಕ ಅಲಂಕರಿಸಿರುವ ಪ್ರಧಾನಿ ಹುದ್ದೆಯ ಕುರಿತು ಕೀಳು ಮಟ್ಟದಲ್ಲಿ ಮಾತನಾಡಿ ನಿಮ್ಮ ಕೀಳು ಸಂಸ್ಕಾರ ಅನಾವರಣ ಮಾಡಿಕೊಂಡಿದ್ದೀರಿ. ಸರ್ಕಾರಿ ಬಂಗಲೆಯಲ್ಲೇ ಉಳಿಯಬೇಕೆಂಬ ಹಟಕ್ಕೆ ಪ್ರತಿಪಕ್ಷ ಸ್ಥಾನ ಪಟ್ಟು ಹಿಡಿದು ಉಳಿಸಿಕೊಂಡ ನಿಮ್ಮಂತವರಿಂದ ಇನ್ನೇನು ನಿರೀಕ್ಷಿಸಲು ಸಾಧ್ಯ?" ಎಂದು ಪ್ರಶ್ನಿಸಿದ್ದಾರೆ.
"ಸಿದ್ದರಾಮಯ್ಯನವರೇ, ನಿರಂತರ 20 ವರ್ಷಗಳಿಂದ ಜನರಿಂದ ಆಯ್ಕೆಯಾಗಿ ಸಾಂವಿಧಾನಿಕ ಹುದ್ದೆಯಲ್ಲಿರುವ ಪ್ರಧಾನಿಯ ಕುರಿತು ಏಕವಚನದಲ್ಲಿ ಮಾತನಾಡುವ ಮುನ್ನ ಎಚ್ಚರವಹಿಸಿ. ನಿಮ್ಮ ದುರಹಂಕಾರ, ದಾರ್ಷ್ಟ್ಯಕ್ಕಾಗಿ ಮಾಜಿ ಮುಖ್ಯಮಂತ್ರಿಯೊಬ್ಬರಿಂದ ನಿಮ್ಮ ಸಾಂವಿಧಾನಿಕ ಹುದ್ದೆಯ ಮೇಲೆ ಪ್ರಯೋಗವಾದ ಪದವನ್ನು ಹೇಗೆ ಅರಗಿಸಿಕೊಂಡಿರಿ?" ಎಂದು ಕೇಳಿದ್ದಾರೆ.
ಸಿದ್ದರಾಮಯ್ಯನವರೇ, ಮಾತೆತ್ತಿದರೆ ನಾನು ಹಳ್ಳಿಯವನು, ನಾನು ಮಾತನಾಡುವ ಶೈಲಿ ಹೀಗೆ ಎನ್ನುವ ನಿಮಗೆ ಗ್ರಾಮೀಣ ಸಂಸ್ಕೃತಿಯ ಅರಿವೇ ಇಲ್ಲ.ಅನ್ಯರನ್ನು ಪ್ರೀತಿ, ಬಹುವಚನ, ಆದರದಿಂದ ಮಾತನಾಡುವುದು ಗ್ರಾಮೀಣ ಸಂಸ್ಕೃತಿ. ಆದರೆ ನಿಮ್ಮಂಥ 'ಮನೆಮುರುಕರು' ಏಕವಚನ ಪ್ರಯೋಗವನ್ನೇ ಗ್ರಾಮೀಣ ಸಂಸ್ಕಾರ ಎಂದುಕೊಂಡಿದ್ದಾರೆ ಎಂದು ಕಿಡಿಕಾರಿದೆ.
ಅಪ್ಪ, ಅಜ್ಜಿ, ಮುತ್ತಾತ ಪ್ರಧಾನಿಯಾಗಿದ್ದರೆಂಬ ಕಾರಣಕ್ಕೆ ತಾನು ಪ್ರಧಾನಿಯಾಗಬೇಕೆಂದು ಓರ್ವ "ಹೆಬ್ಬೆಟ್ಟು" ಗಿರಾಕಿ ಕನಸು ಕಾಣುತ್ತಿದ್ದಾನೆ. ಸಿದ್ದರಾಮಯ್ಯನವರೇ, ಆತನ ಯೋಗ್ಯತೆ, ಅರ್ಹತೆ ಏನು ಎಂದು ವಿಚಾರಿಸಿ. ನಿಮ್ಮ ಶಾಶ್ವತ ಪ್ರಧಾನಿ ಅಭ್ಯರ್ಥಿಯ ಬಗ್ಗೆಯೂ ಹೀಗೇ ಮಾತನಾಡುತ್ತೀರಾ ನೀವು? ಎಂದು ಕೇಳಿದ್ದಾರೆ.