ಶ್ರೀನಗರ, ಅ.17 (DaijiworldNews/HR): ಗುರುವಾರ ಸಂಜೆ ಜಮ್ಮು ಮತ್ತು ಕಾಶ್ಮೀರದ ಪೂಂಚ್ನಲ್ಲಿ ಉಗ್ರರೊಂದಿಗೆ ನಡೆದ ಗುಂಡಿನ ಕಾಳಗದಲ್ಲಿ ನಾಪತ್ತೆಯಾಗಿದ್ದ ಜೂನಿಯರ್ ಕಮಿಷನ್ಡ್ ಆಫೀಸರ್ (ಜೆಸಿಒ) ಸೇರಿದಂತೆ ಇಬ್ಬರು ಸೈನಿಕರ ಮೃತದೇಹಗಳು ಪತ್ತೆಯಾಗಿದೆ.
ಉಗ್ರರು ಅಡಗಿರುವ ಮಾಹಿತಿಯ ಮೇಲೆ ಭಾರತೀಯ ಸೇನೆ ಕಳೆದ ಗುರುವಾರ ಕಾಶ್ಮೀರದ ಫೂಂಚ್ ನಗರದಲ್ಲಿ ಉಗ್ರರಿಗಾಗಿ ತೀವ್ರ ಹುಡುಕಾಟ ನಡೆಸಿದ್ದು, ಈ ವೇಳೆ ಉಗ್ರರು ಸೈನಿಕರ ವಿರುದ್ಧ ಏಕಾಏಕಿ ಗುಂಡಿನ ದಾಳಿ ನಡೆಸಿದ್ದರು. ಈ ದಾಳಿಯಲ್ಲಿ ಐದು ಮಂದಿ ಯೋಧರು ಹುತಾತ್ಮರಾಗಿದ್ದರು. ಹೀಗಾಗಿ ಈ ಭಾಗದಲ್ಲಿ ಸೇನೆ ಕೂಬಿಂಗ್ ಕಾರ್ಯಾಚರಣೆ ನಡೆಸಿ 48 ಗಂಟೆಗಳಲ್ಲಿ ಎಲ್ಲಾ ಉಗ್ರರನ್ನೂ ಹೊಡೆದುರುಳಿಸಿ ಭಾರತೀಯ ಸೈನಿಕರ ಮೃತದೇಹಗಳನ್ನು ಪತ್ತೆ ಮಾಡಿದ್ದಾರೆ ಎನ್ನಲಾಗಿದೆ.
ಇನ್ನು ಸೇನೆಯು ಗುರುವಾರ ಭಯೋತ್ಪಾದಕರಿಂದ ಭಾರೀ ಗುಂಡಿನ ದಾಳಿಗೆ ಒಳಗಾದ ನಂತರ ಜೆಸಿಒ ಮತ್ತು ಯೋಧ ನಾಪತ್ತೆಯಾಗಿದ್ದಾರೆ. ಪೂಂಛ್ ನ ಮೆಂಧರ್ ನ ನಾರ್ ಖಾಸ್ ಅರಣ್ಯದ ದಟ್ಟ ಅರಣ್ಯ ಪ್ರದೇಶದಲ್ಲಿ ಭಾರತೀಯ ಸೇನೆಯು ಜಮ್ಮು ಮತ್ತು ಕಾಶ್ಮೀರ ಪೊಲೀಸರೊಂದಿಗೆ ನಡೆಸಿದ ಶೋಧ ಕಾರ್ಯಾಚರಣೆಯಲ್ಲಿ ಸುಬೇದಾರ್ ಅಜಯ್ ಸಿಂಗ್ ಮತ್ತು ನಾಯಕ್ ಹರೇಂದ್ರ ಸಿಂಗ್ ಅವರ ಮೃತದೇಹ ಪತ್ತೆಯಾಗಿದೆ ಎಂದು ಸೇನೆ ತಿಳಿಸಿದೆ.