ಬರ್ಹಾನ್ಪುರ, ಅ.17 (DaijiworldNews/PY): "ಕಾಂಗ್ರೆಸ್ ಪಕ್ಷ ಸರ್ಕಸ್ ಆಗಿ ಬದಲಾಗಿದೆ" ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ವ್ಯಂಗ್ಯವಾಡಿದ್ದಾರೆ.
ನಗರದಲ್ಲಿ ನಡೆದ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅವರು, "ಅಮರಿಂದರ್ ಸಿಂಗ್ ಅವರು ಪಂಜಾಬ್ ಸಿಎಂ ಆಗಿ ಸರ್ಕಾರವನ್ನು ಸರಾಗವಾಗಿ ಮುನ್ನಡೆಸುತ್ತಿದ್ದರು. ಆದರೆ, ಅವರನ್ನು ಕೆಳಗಿಳಿಸಿ ಚರಣ್ಸಿಂಗ್ ಚನ್ನಿ ಅವರನ್ನು ಸಿಎಂ ಮಾಡಲಾಗಿದೆ" ಎಂದು ಆರೋಪಿಸಿದ್ದಾರೆ.
"ಕಾಂಗ್ರೆಸ್ ಸರ್ಕಾರವಿರುವ ರಾಜಸ್ಥಾನದಲ್ಲಿ ಸಿಎಂ ಅಶೋಕ್ ಗೆಹ್ಲೋಟ್ ಹಾಗೂ ಪ್ರಮುಖ ನಾಯಕ ಸಚಿನ್ ಪೈಲಟ್ ಸಂಬಂಧ ಹಳಸಿದೆ. ಇದೇ ಪರಿಸ್ಥಿತಿ ಛತ್ತೀಸ್ಗಡಲ್ಲಿಯೂ ಇದೆ" ಎಂದಿದ್ದಾರೆ.
"ರಾಹುಲ್ ಗಾಂಧಿಯೇ ಕಾಂಗ್ರೆಸ್ ಅಲ್ಲ. ಆ ಪಕ್ಷವನ್ನು ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಮುನ್ನಡೆಸುತ್ತಿದ್ದಾರೆ. ಆದರೆ, ರಾಜ್ಯಗಳಲ್ಲಿನ ಮುಖ್ಯಮಂತ್ರಿಗಳನ್ನು ಕೆಳಗಿಳಿಸುವ ಸಂಪೂರ್ಣ ಹಕ್ಕು ರಾಹುಲ್ ಗಾಂಧಿಗೆ ಇದೆ" ಎಂದು ಹೇಳಿದ್ದಾರೆ.