ಬೆಂಗಳೂರು, ಅ.17 (DaijiworldNews/PY): "ಬೆಣ್ಣೆ ಕಿತ್ತು ಬಾಲ ಸಿಕ್ಕಿಸಿಕೊಂಡ ಕೋತಿ" ಕಥೆಯಂತಾಗಿದೆ ಈ ಕಾಂಗ್ರೆಸ್ಸಿಗರ ಸ್ಥಿತಿ. ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸುತ್ತೇವೆ ಎಂದವರು, ಈಗ ನಾನೇ ಖಾಯಂ ಅಧ್ಯಕ್ಷೆ ಎನ್ನುತ್ತಾರೆ! ಎಂದು ರಾಜ್ಯ ಬಿಜೆಪಿ ಟೀಕಿಸಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಬಿಜೆಪಿ, "ಬೆಣೆ ಕಿತ್ತು ಬಾಲ ಸಿಕ್ಕಿಸಿಕೊಂಡ ಕೋತಿ" ಕಥೆಯಂತಾಗಿದೆ ಈ ಕಾಂಗ್ರೆಸ್ಸಿಗರ ಸ್ಥಿತಿ. ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸುತ್ತೇವೆ ಎಂದವರು, ಈಗ ನಾನೇ ಖಾಯಂ ಅಧ್ಯಕ್ಷೆ ಎನ್ನುತ್ತಾರೆ! ವಂಶ ಪಾರಂಪರ್ಯ ಆಳ್ವಿಕೆ ಬಗ್ಗೆ ಅಷ್ಟೊಂದು ವ್ಯಾಮೋಹವೇ? ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಕಾಂಗ್ರೆಸ್ನಲ್ಲಿ ನೆಲೆ-ಬೆಲೆ ಎರಡೂ ಇಲ್ಲ ಎಂದಿದೆ.
ಮೈಸೂರಿನಿಂದ ಬೆಳಗಾವಿಯವರೆಗೆ ಸಿದ್ದರಾಮಯ್ಯ ಕಾಲದಲ್ಲಿ ನಡೆದ ಹಿಂದು ಕಾರ್ಯಕರ್ತರ ಹತ್ಯೆಗೆ ಲೆಕ್ಕವೇ ಇಲ್ಲ. ಅಧಿಕಾರ ದುರ್ಬಳಕೆ ಮಾಡಿಕೊಂಡು ಆ ನರಮೇಧಕ್ಕೆ ಬರೆದ ಷರಾಗಳನ್ನು ಜನ ನಂಬಬೇಕೆ? ಹಿಂದೂಗಳ ರಕ್ತವನ್ನು ಅಂಟಿಸಿಕೊಂಡ "ಕೈ" ನಿಮ್ಮದು ಎಂದು ಹೇಳಿದೆ.
"ಸಿದ್ದರಾಮಯ್ಯ ಆಡಳಿತದ ಕಾಲ ಹಿಂದುಗಳ ಪಾಲಿಗೆ ರಕ್ತಚರಿತ್ರೆಯ ಕರಾಳ ದಿನಗಳಾಗಿದ್ದವು. ಧರ್ಮನಿಷ್ಠರನ್ನು ಬರ್ಬರವಾಗಿ ಹತ್ಯೆ ಮಾಡಿದವರಿಗೆ ಬೆಂಬಲವಾಗಿ ನಿಂತವರು ನೀವೇ ಅಲ್ಲವೇ? ಹಿಂದುಗಳ ರಕ್ತ ಭೂಮಿ ತೋಯುವಂತೆ ಮಾಡಿದ ನಿಮಗೂ ನರಹಂತಕ ತಾಲಿಬಾನಿಗಳಿಗೂ ವ್ಯತ್ಯಾಸವುಂಟೇ?" ಎಂದು ಪ್ರಶ್ನಿಸಿದೆ.
"ಗುಲಾಮ್ ನಬಿ ಆಜಾದ್, ಕಪಿಲ್ ಸಿಬಲ್, ಆನಂದ ಶರ್ಮಾ ಸೇರಿದಂತೆ ಜಿ23 ನಾಯಕರು ಕಾಂಗ್ರೆಸ್ ಪಕ್ಷದ ಕಟ್ಟಾಳುಗಳಲ್ಲವೇ? ಗಾಂಧಿ ಕುಟುಂಬದ ಬಗ್ಗೆ, ಕಾಂಗ್ರೆಸ್ ಭವಿಷ್ಯದ ಬಗ್ಗೆ ಹೇಳಿದ ಸತ್ಯ ಕಟುವಾಗಿತ್ತೆಂಬ ಕಾರಣಕ್ಕೆ ನಕಲಿ ಗಾಂಧಿ ಕುಟುಂಬದ ಗುಲಾಮರು ಸಿಬಲ್ ಮನೆ ಮೇಲೆ ದಾಳಿ ನಡೆಸಿದ್ದಲ್ಲವೇ? ಈಗ ನಿಮ್ಮ ಕ್ರಮ ಯಾರ ಮೇಲೆ?" ಎಂದು ಕೇಳಿದೆ.
"ಆಧಾರವಿಲ್ಲದ ಮಾತುಗಳಿಗೆ ಪಕ್ಷದ ಚೌಕಟ್ಟಿನಲ್ಲಿ ಶಿಸ್ತು ಕ್ರಮ ಕೈಗೊಂಡಿದ್ದೀರಿ ಎಂಬುದು ನಿಮ್ಮ ವಾದ, ಅದಕ್ಕಾಗಿ ಅಭಿನಂದನೆಗಳು. ಹಾಗಾದರೆ ಈ ಜಿ23 ನಾಯಕರ ಬಗ್ಗೆ ಏನು ಹೇಳುತ್ತೀರಿ? ಅವರು ಗಾಂಧಿ ಕುಟುಂಬದ ವಾರಸುದಾರಿಕೆ ಟೀಕೆ ಮಾಡಿದ್ದು ಬಾಯಿ ಚಪಲವೋ, ಸತ್ಯವೋ?" ಎಂದು ಪ್ರಶ್ನಿಸಿದೆ.