ಹುಬ್ಬಳ್ಳಿ, ಅ.17 (DaijiworldNews/PY): "ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಅವರನ್ನು ನಾನು ಭೇಟಿ ಮಾಡಿದ್ದೇನೆ ಎನ್ನುವುದನ್ನು ಸಾಬೀತುಪಡಿಸಿಪಡಿಸಿದ್ದೇ ಆದಲ್ಲಿ ರಾಜಕೀಯದಿಂದಲೇ ನಿವೃತ್ತಿ ಪಡೆಯುತ್ತೇನೆ" ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಬಿಎಸ್ವೈ ಅವರನ್ನು ಭೇಟಿ ಮಾಡಿದ್ದೇನೆ ಎಂದು ಹೇಳಿರುವುದು ಸುಳ್ಳು. ಬಿಎಸ್ವೈ ಅವರ ಹಾದಿ ಆರ್ಎಸ್ಎಸ್ ಆಗಿದ್ದು, ಹಾಗಾಗಿ ಅವರ ಜೊತೆ ಕೈಜೋಡಿಸುವುದು ಸಾಧ್ಯವಿಲ್ಲ. ನನ್ನ ರಾಜಕೀಯ ಭವಿಷ್ಯ ಆರ್ಎಸ್ಎಸ್ ವಿರೋಧವಾಗಿದೆ. ಅಧಿಕಾರದಲ್ಲಿ ಯಾರೇ ಇದ್ದರೂ ಅವರ ಮನೆ ಬಾಗಿಲು ತಟ್ಟಲು ನಾನು ಹೋಗುವುದೇ ಇಲ್ಲ" ಎಂದಿದ್ಧಾರೆ.
"ಸಿಎಂ ಬಸವರಾಜ ಬೊಮ್ಮಾಯಿ ಅವರು ಆರ್ಎಸ್ಎಸ್ ಅನ್ನು ಹೊಗಳಿದ್ದಾರೆ. ಈ ಕಾರಣದಿಂದ ಅವರು ಅಧಿಕಾರವನ್ನು ಉಳಿಸಿಕೊಳ್ಳಬಹುದು ಎನ್ನುವ ಚಿಂತನೆಯಲ್ಲಿ ಇದ್ದಾರೆ" ಎಂದು ತಿಳಿಸಿದ್ದಾರೆ.
"ರಾಜ್ಯ ಸರ್ಕಾರವು ಚಾಣಕ್ಯ ವಿಶ್ವವಿದ್ಯಾನಿಲಯವನ್ನು ಸ್ಥಾಪಿಸಲು ಬೆಂಗಳೂರು ವಿಮಾನ ನಿಲ್ದಾಣದ ಸಮೀಪ 116 ಎಕರೆ ಪ್ರಧಾನ ಭೂಮಿಯನ್ನು ಆರ್ಎಸ್ಗೆ ನೀಡುತ್ತಿದೆ" ಎಂದು ದೂರಿದ್ದಾರೆ.