ಬೆಂಗಳೂರು, ಅ.17 (DaijiworldNews/PY): "ಜೆಡಿಎಸ್ ಅಧಿಕಾರಕ್ಕೆ ಬಂದಲ್ಲಿ ಮುಸ್ಲಿಂ ನಾಯಕರೋರ್ವರನ್ನು ಸಿಎಂ ಮಾಡುತ್ತೇವೆ ಎಂದು ಆ ಪಕ್ಷದ ವರಿಷ್ಠರಾದ ದೇವೇಗೌಡ ಹಾಗೂ ಹೆಚ್ ಡಿ ಕುಮಾರಸ್ವಾಮಿ ಅವರು ಘೋಷಿಸಲಿ. ಆಗ ಜೆಡಿಎಸ್ ಬೆಂಬಲಿಸುವ ಕುರಿತು ನಾವೆಲ್ಲರೂ ಯೋಚಿಸುತ್ತೇವೆ" ಎಂದು ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ಖಾನ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಸಿಎಂ ಆಗಿದ್ದ ಸಂದರ್ಭ ಕುಮಾರಸ್ವಾಮಿ ಅವರು ಹಜ್ ಯಾತ್ರೆ ಉದ್ಘಾಟನೆಗೆ ಬರಲಿಲ್ಲ. ಜಗದೀಶ ಶೆಟ್ಟರ್, ಸಿದ್ದರಾಮಯ್ಯ ಹಾಗೂ ಡಿ ವಿ ಸದಾನಂದ ಗೌಡ ಅವರು ಬಂದಿದ್ದರು. ಬ್ಯಾಂಕ್ವೆಟ್ ಹಾಲ್ನಲ್ಲಿ ಸಿದ್ದರಾಮಯ್ಯ ಅವರು ಟಿಪ್ಪು ಜಯಂತಿ ಆಚರಿಸುತ್ತಿದ್ದರು. ಆದರೆ, ಹೆಚ್ಡಿಕೆ ಅವರು ರವೀಂದ್ರ ಕಲಾಕ್ಷೇತ್ರದಲ್ಲಿ ಟಿಪ್ಪು ಜಯಂತಿ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಅವರಿಗೆ ಮುಸ್ಲಿಂಮರ ಮೇಲೆ ಪ್ರೀತಿ ಇರುತ್ತಿದ್ದರೆ ಹೀಗೆ ಮಾಡುತ್ತಿರಲಿಲ್ಲ" ಎಂದು ಹೇಳಿದ್ದಾರೆ.
"ನಮ್ಮ ಸಿದ್ದರಾಮಯ್ಯ ಅವರ ಮಾತನ್ನು ಮಾತ್ರವೇ ಕೇಳುತ್ತದೆ. ಬೇರೆ ಯಾವ ನಾಯಕರನ್ನ ಮಾತನ್ನು ಒಪ್ಪುವುದಿಲ್ಲ. ನನ್ನ ಮಾತನ್ನೂ ಕೇಳುವುದಿಲ್ಲ. ಈ ವಿಚಾರವನ್ನು ಹೆಚ್ಡಿಕೆ ಅವರಿಗೆ ಸಹಿಸಲು ಆಗುತ್ತಿಲ್ಲ" ಎಂದಿದ್ದಾರೆ.
"ಸಿ ಎಂ ಇಬ್ರಾಹಿಂ ಅವರನ್ನು ರಾಜ್ಯಸಭೆ ಸದಸ್ಯರಾಗಿ ಮಾಡಿ ಎಂದು ಹೆಚ್ಡಿಕೆ ಹಾಗೂ ದೇವೇಗೌಡರು ಕಾಲು ಹಿಡಿದರೂ ಮಾಡಲಿಲ್ಲ. ಸೋಲುತ್ತೇವೆ ಎಂದು ತಿಳಿದಾಗಲೂ ಅವರನ್ನು ನಿಲ್ಲಿಸಿದರು. ಅಲ್ಪಸಂಖ್ಯಾತರಿಗೆ ಹಾಸನದಲ್ಲಿ ಏಕೆ ಟಿಕೆಟ್ ಕೊಡುವುದಿಲ್ಲ. ಬಿಜೆಪಿಗೆ ಉಪಚುನಾವಣೆಗಳಲ್ಲಿ ಸಹಾಯ ಮಾಡುವ ನಿಟ್ಟಿನಲ್ಲಿ ಅಲ್ಪಸಂಖ್ಯಾತರಿಗೆ ಟಿಕಟ್ ನೀಡಿದ್ದಾರೆ" ಎಂದು ತಿಳಿಸಿದ್ದಾರೆ.