ಹಾನಗಲ್, ಅ.16 (DaijiworldNews/HR): ಸಂಗೂರು ಸಕ್ಕರೆ ಕಾರ್ಖಾನೆ ಉಪಾಧ್ಯಕ್ಷರಾಗಿದ್ದಾಗ ಕಾರ್ಖಾನೆ ನುಂಗಿ ನೀರು ಕುಡಿದಿದ್ದ ಬಿಜೆಪಿ ಅಭ್ಯರ್ಥಿ ಶಿವರಾಜ ಸಜ್ಜನಗೆ ಈ ಬಾರಿಯ ಉಪಚುನಾವಣೆಯಲ್ಲಿ ತಕ್ಕಪಾಠ ಕಲಿಸಿ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕರೆ ನೀಡಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ ಮಾನೆ ಪರ ಪ್ರಚಾರ ನಡೆಸಿ ಮಾತನಾಡಿದ ಅವರು, "ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ದಿನಗಳಿಂದ ಕಾಂಗ್ರೆಸ್ ಸರಕಾರದ ಜನಪರ ಯೋಜನೆಗಳನ್ನು ಒಂದೊಂದಾಗಿ ಮೊಟಕುಗೊಳಿಸುತ್ತಾ ಬರುತ್ತಿದ್ದು, ಕೇಂದ್ರದ ಮೋದಿ ಸರಕಾರ ಜನರಿಗೆ ಸುಳ್ಳು ಹೇಳಿ ಭ್ರಮಾ ಲೋಕ ಸೃಷ್ಟಿಸಿದ್ದಾರೆ" ಎಂದರು.
ಇನ್ನು ವರ್ಷಕ್ಕೆ 2 ಕೋಟಿ ಉದ್ಯೋಗ ನೀಡುತ್ತೇನೆಂದು ಬಿಜೆಪಿಯವರು ಹೇಳಿದ್ದರು. ಆದರೆ ದೇಶದಲ್ಲಿ 12 ಕೋಟಿ ಜನರು ಉದ್ಯೋಗ ಕಳೆದುಕೊಂಡಿದ್ದಾರೆ. ಯಾವುದೇ ಅಭಿವೃದ್ಧಿ ನಡೆದಿಲ್ಲ. ಅಚ್ಚೇ ದಿನ್ ಬರಲಿದೆ ಎಂದು ಅಧಿಕಾರಕ್ಕೆ ಬಂದ ಮೋದಿಯಿಂದಾಗಿ ಹಸಿವು, ಬಡತನ ಮತ್ತಷ್ಟು ಹೆಚ್ಚಿದೆ" ಎಂದು ಹೇಳಿದ್ದಾರೆ.