ಚಿಕ್ಕಮಗಳೂರು, ಅ.16 (DaijiworldNews/PY): "ರಾಮ ಮಂದಿರಕ್ಕೆ ಮಾಜಿ ಸಿಎ ಹೆಚ್ ಡಿ ಕುಮಾರಸ್ವಾಮಿ ಅವರು ಎಷ್ಟು ಹಣ ನೀಡಿದ್ದಾರೆ ಎನ್ನುವುದನ್ನು ತಿಳಿಸಲಿ. ಬಳಿಕ ಲೆಕ್ಕ ಕೇಳಿ" ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ರಾಮ ಮಂದಿರಕ್ಕೆ ಹಣ ನೀಡಿದವರಿಗೆ ಲೆಕ್ಕ ಕೇಳಲು ಅಧಿಕಾರ ಇದೆ. ಚಳವಳಿಯಲ್ಲಿ ಪಾತ್ರ ಇದ್ದವರಿಗೂ ಲೆಕ್ಕ ಕೇಳುವ ಹಕ್ಕು ಇದೆ. ಹಣ ದುರುಪಯೋಗ ಮಾಡಿಕೊಳ್ಳಲು ಅಲ್ಲಿ ಫ್ಯಾಮಿಲಿ ಖಾಂದಾನ್ ಇಲ್ಲ" ಎಂದಿದ್ದಾರೆ.
"ರಾಮ ಮಂದಿರ ಚಳವಳಿಯಲ್ಲಿ ಹೆಚ್ಡಿಕೆ ಪಾತ್ರ ಏನು?. ಅವರು ಹೋರಾಟ ಸೇರಿದಂತೆ ಶಿಲಾ ಪೂಜೆ, ಇಟ್ಟಿಗೆ ಪೂಜೆ, ಕರ ಸೇವೆಯಲ್ಲಿ ಭಾಗಿಯಾಗಿದ್ದಾರಾ?" ಎಂದು ಪ್ರಶ್ನಿಸಿದ್ದಾರೆ.
"ಹೆಚ್ಡಿಕೆ ಅವರ ಹೇಳಿಕೆಯಲ್ಲಿ ಯಾವುದೇ ಸ್ಪಷ್ಟತೆ ಇಲ್ಲ. ಅಯೋಧ್ಯಾ ಹೋರಾಟ ಮಾಡುವ ವೇಳೆ ಹೆಚ್ಡಿಕೆ ಅವರು ನಮಗೆ ಬೆಂಬಲ ನೀಡಿದ್ದಾರಾ?. ನಾವು ರಾಮ ಮಂದಿರ ಕಟ್ಟುತ್ತೇವೆ ಎಂದಾಗ ಅವರು ಮಸೀದಿಯ ಜಪ ಮಾಡುತ್ತಿದ್ದರು" ಎಂದಿದ್ದಾರೆ.