ನವದೆಹಲಿ, ಅ.16 (DaijiworldNews/PY): ದೆಹಲಿ-ಹರಿಯಾಣ ನಡುವಿನ ಸಿಂಘು ಗಡಿಯಲ್ಲಿ 35 ವರ್ಷದ ಲಖ್ ಬೀರ್ ಸಿಂಗ್ ಅನ್ನು ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಟುಂಬಸ್ಥರು ಆರೋಪಿಸಿದ್ದು, "ಲಖ್ ಬೀರ್ ಸಿಂಗ್ ಅನ್ನು ರೈತರ ಪ್ರತಿಭಟನಾ ಸ್ಥಳಕ್ಕೆ ಆಮಿಷ ಒಡ್ಡಿ ಕರೆಸಿ ಇದೀಗ ಹತ್ಯೆ ಮಾಡಲಾಗಿದೆ" ಎಂದಿದ್ದಾರೆ.
"ಲಖ್ ಬೀರ್ ಸಿಂಗ್ನನ್ನು ರೈತರ ಪ್ರತಿಭಟನಾ ಸ್ಥಳಕ್ಕೆ ಹಣದ ಆಮಿಷ ಒಟ್ಟಿ ಕರೆಸಿದ್ದಾರೆ. ಆತ ಕೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದು, ಕಷ್ಟಕ್ಕೆ ಆರ್ಥಿಕ ನೆರವಾಗಲಿದೆ ಎಂದು ಆತ ಪ್ರತಿಭಟನಾ ಸ್ಥಳಕ್ಕೆ ಹೋಗಿದ್ದಾನೆ" ಎಂದು ಲಖ್ ಬೀರ್ ಕುಟುಂಬಸ್ಥರು ಪೊಲೀಸರ ಮುಂದೆ ಹೇಳಿದ್ದಾರೆ.
"ಲಖ್ ಬೀರ್ ಬಳಿ ಕೇವಲ 50 ರೂ. ಮಾತ್ರವೇ ಇತ್ತು. ಆತ ಚಬಾಲ್ನಲ್ಲಿ ಕೆಲಸಕ್ಕೆ ಹೋಗುವುದಾಗಿ ಹೇಳಿದ್ದರು. ಈ ನಡುವೆ ಪ್ರತಿಭಟನಾ ಸ್ಥಳಕ್ಕೆ ಬಂದಲ್ಲಿ ಹಣ ನೀಡುವುದಾಗಿ ಹಲವರು ಒತ್ತಾಯಿಸಿದ್ದಾರೆ. ಈ ಕಾರಣದಿಂದ ರೈತ ಪ್ರತಿಭಟನೆಯಲ್ಲಿ ಭಾಗವಹಿಸಲು ಹೋಗಿದ್ದ ಲಖ್ ಬೀರ್ ಸಿಂಗ್ ಹತ್ಯೆಯಾಗಿದ್ದಾರೆ" ಎಂದು ಲಖ್ ಬೀರ್ ಸಿಂಗ್ ತಂಗಿ ರಾಜ್ ಕೌರ್ ತಿಳಿಸಿದ್ದಾರೆ.
ಲಕ್ ಬೀರ್ ಸಿಂಗ್ ಹತ್ಯೆ ಮಾಡಿದ ಆರೋಪಿ ನಿಹಾಂಗ್ ಸಿಖ್ ಸಮುದಾಯಕ್ಕೆ ಸೇರಿದ ಸರವಜಿತ್ ಸಿಂಗ್ ಅನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಯ ಬಂಧನವಾದ ಕೂಡಲೇ ರೈತ ಸಂಘಟನೆಗಳು ನಿಹಾಂಗ್ ಪಂಥದಿಂದ ಅಂತರ ಕಾಯ್ದುಕೊಂಡಿದ್ದು, "ಪ್ರತಿಭಟನೆಗೂ ಹಾಗೂ ರೈತ ಸಂಘಟನೆಗೂ ಯಾವುದೇ ಸಂಬಂಧವಿಲ್ಲ" ಎಂದಿದ್ದಾರೆ.