ಬೆಂಗಳೂರು, ಅ.16 (DaijiworldNews/HR): ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ಅವರಿರು ಅಲ್ಪಸಂಖ್ಯಾತ ಮತಗಳನ್ನು ಸೆಳೆಯಲು ಹಲ್ಲು ಗಿಂಜುತ್ತಿದ್ದು, ಅವರು ಆರ್ ಎಸ್ಎಸ್ ಬಗ್ಗೆ ಹೆಚ್ಚು ಮಾತನಾಡುತ್ತಿದ್ದಾರೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಟೀಕಿಸಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಆರ್ಎಸ್ಎಸ್ ಅನ್ನು ತೆಗಳುವುದರಿಂದ ಅಲ್ಪಸಂಖ್ಯಾತ ಮತಗಳನ್ನು ಯಾರು ಎಷ್ಟು ಪಡೆಯುತ್ತಾರೆಂದು ಸ್ಪರ್ಧೆಯಿದ್ದು, ಆರ್ಎಸ್ಎಸ್ ಒಳ್ಳೆಯದು ಅಂತ ಅವರಿಗೂ ಗೊತ್ತಿದೆ. ಟೀಕೆ ಮಾಡುವುದರಿಂದ ಅರ್ಥ ಇಲ್ಲ. ಅಲ್ಪಸಂಖ್ಯಾತ ಸಮುದಾಯ ಒಲಿಸಿಕೊಳ್ಳಲು ಇಂಥ ಹೇಳಿಕೆಗಳನ್ನು ಕೊಡುತ್ತಿದ್ದಾರೆ" ಎಂದರು.
ಇನ್ನು ಬಿನ್ನಿಮಿಲ್ ಪೊಲೀಸ್ ಕ್ವಾಟ್ರಸ್ ಬೀಳುವ ಹಂತದಲ್ಲಿರುವ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಬಿನ್ನಿಮಿಲ್ ಗೆ ಹೋಗಿ ಪರಿಶೀಲನೆ ಮಾಡುತ್ತೇನೆ. ಆ ಕಟ್ಟಡದ ಪರಿಸ್ಥಿತಿ ಗಮನಕ್ಕೆ ಬಂದಿದೆ. ಹಳೆಯ ಕಟ್ಟಡಗಳನ್ನು ಕೆಡವಿ ಹೊಸ ಕಟ್ಟಡಗಳನ್ನು ನಿರ್ಮಾಣ ಮಾಡಬೇಕು" ಎಂದು ಹೇಳಿದ್ದಾರೆ.