ಬೆಂಗಳೂರು, ಅ.16 (DaijiworldNews/PY): "ರಾಜ್ಯದಲ್ಲಿ 1 ರಿಂದ 5ನೇ ತರಗತಿಗಳನ್ನು ಪುನರಾರಂಭಿಸುವ ಬಗ್ಗೆ ಇನ್ನೆರಡು ದಿನಗಳಲ್ಲಿ ತೀರ್ಮಾನಿಸಲಾಗುವುದು. ಶನಿವಾರ ಹಾಗೂ ಭಾನುವಾರ ತರಗತಿ ನಡೆಸುವ ಕುರಿತು ಚಿಂತಿಸಲಾಗಿದೆ" ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಸಿಎಂ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ಇನ್ನೆರಡು ದಿನಗಳಲ್ಲಿ 1 ರಿಂದ 5ನೇ ತರಗತಿ ಪುನರಾರಂಭ ಕುರಿತಂತೆ ಸಭೆ ನಡೆಯಲಿದೆ. ಸಭೆಯಲ್ಲಿ ತಜ್ಞರು, ಕೊರೊನಾ ಉಸ್ತುವಾರಿಗಳು, ತಾಂತ್ರಿಕಾ ಸಲಹಾ ಸಮಿತಿಯ ಸದಸ್ಯರು ನೀಡುವ ಸಲಹೆಯನ್ನು ಆಧರಿಸಿ ತೀರ್ಮಾನ ತೆಗೆದುಕೊಳ್ಳಲಾಗುವುದು" ಎಂದಿದ್ದಾರೆ.
"ಕೊರೊನಾ ಕಾರಣದಿಂದ ಶಾಲೆ ತಡವಾಗಿ ಪ್ರಾರಂಭವಾಗುತ್ತಿರುವ ಕಾರಣ ಶೈಕ್ಷಣಿಕ ಪಠ್ಯಕ್ರಮ ಕುಂಠಿತಗೊಂಡಿದೆ. ಹಾಗಾಗಿ ಶನಿವಾರ, ಭಾನುವಾರ ತರಗತಿ ನಡೆಸುವ ಬಗ್ಗೆ ಚಿಂತನೆ ನಡೆಸಲಾಗಿದೆ. ಆದರೆ ಪಠ್ಯ ಕಡಿತದ ಬಗ್ಗೆ ಯಾವುದೇ ಪ್ರಸ್ತಾಪ ಇಲ್ಲ" ಎಂದು ತಿಳಿಸಿದ್ದಾರೆ.
"ಪಠ್ಯ ಕ್ರಮ ಸರಿಯಾದ ಸಮಯಕ್ಕೆ ಮುಕ್ತಾಯಗೊಳಿಸುವ ಸಲುವಾಗಿ ಶನಿವಾರ ಹಾಗೂ ಭಾನುವಾರ ತರಗತಿ ನಡೆಸುವ ಚಿಂತನೆ ಇದೆ. ಈ ಕುರಿತು ಶೀಘ್ರದಲ್ಲೇ ಸಿಎಂ ನೇತೃತ್ವದಲ್ಲಿ ನಡೆಯಲಿರುವ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗುವುದು" ಎಂದಿದ್ದಾರೆ.
"ರಾಜ್ಯದಲ್ಲಿ ಕೊರೊನಾ ಪಾಸಿಟಿವ್ ರೇಟ್ ಕಡಿಮೆಯಾಗುತ್ತಿದೆ. ತಜ್ಞರ ಅಭಿಪ್ರಾಯದಂತೆ ದಸರಾ ಮುಗಿದ ಕೂಡಲೇ ಶಾಲೆಗಳನ್ನು ಆರಂಭಿಸುತ್ತೇವೆ. ಇದರೊಂದಿಗೆ ದಸರಾ ಮುಗಿದ ಕೂಡಲೇ ಬಿಸಿಯೂಟ ಪ್ರಾರಂಭವಾಗಲಿದೆ" ಎಂದು ಇದಕ್ಕೂ ಮುನ್ನ ಸಚಿವರು ಹೇಳಿದ್ದರು.