ಹಾನಗಲ್, ಅ.16 (DaijiworldNews/PY): ಅಲ್ಪಸಂಖ್ಯಾತರಿಗೆ ಕಾಂಗ್ರೆಸ್ನಲ್ಲಿ ಅನ್ಯಾಯ ಮಾಡಲಾಗುತ್ತಿದೆ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಅವರ ಹೇಳಿಕೆಗೆ ಮಾಜಿ ಸಚಿವ ಯು ಟಿ ಖಾದರ್ ತಿರುಗೇಟು ನೀಡಿದ್ದು, "ಕುಮಾರಸ್ವಾಮಿ ಅವರಿಗೆ ಚುನಾವಣೆ ಸಮೀಪಿಸುತ್ತಿದ್ದಂತೆ ಇವೆಲ್ಲವೂ ನೆನಪಾಗುತ್ತದೆ. ಇವೆಲ್ಲಕ್ಕಿಂತ ಮೊದಲು ಅವರು ಅವರ ಪಕ್ಷವನ್ನು ನೋಡಿಕೊಳ್ಳಲಿ" ಎಂದು ಹೇಳಿದ್ದಾರೆ.
ಹಾನಗಲ್ನಲ್ಲಿ ಮಾತನಾಡಿದ ಅವರು, "ಬಿಜೆಪಿ ಹಾಗೂ ಆರ್ಎಸ್ಎಸ್ ಜೆಡಿಎಸ್ ಮೂಲಕ ಅಜೆಂಡಾ ಅನುಷ್ಟಾನ ಮಾಡುತ್ತಿದೆ. ಉಪಚುನಾವಣೆಯಲ್ಲಿ ಇವರಿಗೆ ಜನರೇ ತಕ್ಕ ಪಾಠ ಕಲಿಸುತ್ತಾರೆ" ಎಂದಿದ್ದಾರೆ.
"ಉಪಚುನಾವಣೆ ಸಮೀಪಿಸುತ್ತಿದ್ದಂತೆ ಕುಮಾರಸ್ವಾಮಿ ಅವರು ಏಕೆ ಈ ರೀತಿಯಾದ ಹೇಳಿಕೆ ನೀಡುತ್ತಿದ್ದಾರೆ? ಇದರ ಹಿಂದಿನ ಉದ್ದೇಶವೇನು?. ನಮ್ಮ ಪಕ್ಷದ ಬಗ್ಗೆ ಆರೋಪ ಮಾಡುವ ಮುನ್ನ ಅವರ ಪಕ್ಷದ ಕಡೆ ಗಮನಹರಿಸಲಿ. ಅಲ್ಪಸಂಖ್ಯಾತರಿಗೆ ನಮ್ಮ ಪಕ್ಷದಲ್ಲಿ ಅನ್ಯಾಯವಾಗಿದ್ದಲ್ಲಿ ಅದರ ನಿವಾರಣೆಗೆ ನಮ್ಮ ಪಕ್ಷದ ರಾಜ್ಯ ನಾಯಕರು, ಶಾಸಕರು, ಕಾರ್ಯಕರ್ತರು ಇದ್ದಾರೆ. ನಮ್ಮ ಬಗ್ಗೆ ಮಾತನಾಡುವ ಮೊದಲು ಜೆಡಿಎಸ್ನಲ್ಲಿ ಏನಾಗಿದೆ ಎನ್ನುವುದನ್ನು ಕುಮಾರಸ್ವಾಮಿ ಅವರು ನೋಡಿಕೊಳ್ಳಬೇಕು" ಎಂದು ಹೇಳಿದ್ದಾರೆ.