ದಾವಣಗೆರೆ, ಅ.16 (DaijiworldNews/PY): "ರಾಜ್ಯದಲ್ಲಿ ಕೊರೊನಾ ಶೇ.1ಕ್ಕಿಂತ ಕಡಿಮೆಯಾಗಿದ್ದು, ಕೊರೊನಾ ನಿಯಮ ಸರಳೀಕರಣದ ಬಗ್ಗೆ ಎರಡು ದಿನದಲ್ಲಿ ತಜ್ಞರೊಂದಿಗೆ ಚರ್ಚಿಸಿ ನಿರ್ಧರಿಸುತ್ತೇವೆ" ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ತಜ್ಞರ ಸಲಹೆಯ ಬಳಿ 1ರಿಂದ 5ನೇ ತರಗತಿ ಆರಂಭದ ಕುರಿತು ಕ್ರಮ ಕೈಗೊಳ್ಳುತ್ತೇವೆ" ಎಂದಿದ್ದಾರೆ.
ಉಪಚುನಾವಣೆಯ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, "ಬಿಜೆಪಿಗೆ ಉಪಚುನಾವಣೆಯಲ್ಲಿ ವಾತಾವರಣ ಪೂರಕವಾಗಿದ್ದು, ಒಗ್ಗಟ್ಟಾಗಿ ಚುನಾವಣೆಗೆ ಪ್ರಚಾರ ಮಾಡಿ ಎರಡು ಕ್ಷೇತ್ರದಲ್ಲಿ ಗೆಲುವು ಸಾಧಿಸುತ್ತೇವೆ" ಎಂದು ಹೇಳಿದ್ದಾರೆ.
"ಮಾಜಿ ಸಿಎಂ ಯಡಿಯೂರಪ್ಪ ಅವರು ಉಪಚುನಾವಣೆಗೆ ಬಂದೇ ಬರುತ್ತಾರೆ. ಬಿಎಸ್ವೈ ಅವರು ಎರಡು ದಿನ ಹಾನಗಲ್, ಎರಡು ದಿನ ಸಿಂದಗಿಯಲ್ಲಿ ಪ್ರಚಾರ ನಡೆಸಲಿದ್ದಾರೆ. ಅವರು ರೋಡ್ ಶೋ ಗೂ ಕೂಡಾ ಬರಲಿದ್ದಾರೆ. ಈ ವಿಚಾರವಾಗಿ ಬಿಎಸ್ವೈ ಅವರೊಂದಿಗೆ ನಾನೇ ಖುದ್ದಾಗಿ ಚರ್ಚೆ ನಡೆಸಿದ್ದು, ಅವರು ಪ್ರಚಾರಕ್ಕೆ ಬರಲು ಒಪ್ಪಿಗೆ ನೀಡಿದ್ದಾರೆ" ಎಂದಿದ್ದಾರೆ.
"ಕಾಂಗ್ರೆಸ್ ನಾಯಕ ಸಿ ಎಂ ಇಬ್ರಾಹಿಂ ಅವರು ನನ್ನ ಆತ್ಮೀಯ ಸ್ನೇಹಿತರು. ಅವರಿಗೆ ಯಾವಾಗ ಜ್ಞಾನೋದಯ ಆಗುತ್ತದೆ ಎಂದು ಅವರಿಗೇ ತಿಳಿದಿಲ್ಲ. ನಾನು ಅವರೊಂದಿಗೆ ಮಾತನಾಡುತ್ತೇನೆ ಎಂದು ಹೇಳಿದ್ದಾರೆ.
"ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಬಗ್ಗೆ ನಾನು ಏನೂ ಹೇಳುವುದಿಲ್ಲ. ಅವರು ದೊಡ್ಡವರು. ಟಿಪ್ಪು ಜಯಂತಿ ಆಚರಣೆ, ಫೋಟೋಗೆ ಹಾರ ಹಾಕಿ ಪೂಜೆ ಮಾಡುವ ಪದ್ಧತಿ ನಮ್ಮದಲ್ಲ" ಎಂದು ಸಿ ಎಂ ಇಬ್ರಾಹಿಂ ಹೇಳಿದ್ದರು.