ಮೈಸೂರು, ಅ 16 (DaijiworldNews/MS): ತಮ್ಮದೇ ಪಕ್ಷದ ನಾಯಕ ಡಿಕೆಶಿಯವರನ್ನ ರಾಜಕೀಯವಾಗಿ ಮುಗಿಸಲು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹೆಣೆದ ವ್ಯವಸ್ಥಿತವಾದ ಷಡ್ಯಂತ್ರ" ಇದು ಎಂದು ಬಿಜೆಪಿ ಸಂಸದ ಪ್ರತಾಪ್ ಸಿಂಹ ಶನಿವಾರ ಹೊಸ ಬಾಂಬ್ ಸಿಡಿಸಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ಧ ಕಾಂಗ್ರೆಸ್ ನಾಯಕರ ಗುಸು ಗುಸು ಮಾತಿನ ವಿಚಾರಕ್ಕೆ ಸಂಬಂಧಿಸಿ ಮಾಧ್ಯಮದೊಂದಿಗೆ ಮಾತನಾಡಿದ ಬಿಜೆಪಿ ಸಂಸದ ಪ್ರತಾಪ್ ಸಿಂಹ " "ಮಾಧ್ಯಮದವರ ಮುಂದೆಯೇ ಸಲೀಂ- ಉಗ್ರಪ್ಪ ಮಾತನಾಡಿದ್ದಾರೆ, ಶಿವಕುಮಾರ್ ಅವರನ್ನ ರಾಜಕೀಯವಾಗಿ ಮುಗಿಸುವ ಷಡ್ಯಂತ್ರ ಇದು. ಸಲೀಂ ಅವರು ಈಗಿರುವ ಸ್ಥಾನಕ್ಕೆ ಕಾರಣ ಡಿಕೆಶಿ. ಉಗ್ರಪ್ಪನವರು ಚುನಾವಣೆ ಗೆಲ್ಲುತ್ತಾರೋ ಬಿಡುತ್ತಾರೋ ಅನ್ನುವುದು ಜನರಿಗೆ ತಿಳಿದಿದೆ. ಉಗ್ರಪ್ಪರನ್ನ ಸಂಸದರನ್ನಾಗಿ ಮಾಡಿದ್ದು ಡಿಕೆಶಿಯವರು. ಹೀಗಿದ್ದರೂ ಕೂಡ ಡಿಕೆಶಿ ಅವರನ್ನ ಟಾರ್ಗೆಟ್ ಮಾಡಲಾಗಿದ್ದು, ಇದಕ್ಕೆ ನೇರವಾದ ಕಾರಣವೇ ಸಿದ್ದರಾಮಯ್ಯ" ಎಂದು ಆರೋಪಿಸಿದ್ದಾರೆ.
"ಸಿದ್ದರಾಮಯ್ಯನವರಿಗೆ ರಾಷ್ಟ್ರ ರಾಜಕಾರಣಕ್ಕೆ ಆಹ್ವಾನವಿದ್ದದ್ದು ಬಹಿರಂಗ ಸತ್ಯ.! ಹೀಗಾಗಿ ಎಲ್ಲಿ ದೆಹಲಿಯತ್ತ ಹೊಗಬೇಕಾದಿತೋ ಎಂದು ವಿಚಲಿತರಾಗಿ ಡಿಕೆಶಿ ಮೇಲೆ ಸಿದ್ದರಾಮಯ್ಯ ಷಡ್ಯಂತ್ರ ಮಾಡಿದ್ದಾರೆ. ಅವರು ಎಲಿಮೆನೆಟರಿ ಆಗಿ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.
ಒಟ್ಟಾರೆ ಕಾಂಗ್ರೆಸ್ ಒಳಜಗಳದಿಂದಲೇ ಸಂಪೂರ್ಣವಾಗಿ ನಾಶವಾಗುತ್ತದೆ. ಅನಾಯಾಸವಾಗಿ ಇದರ ಲಾಭ ಬಿಜೆಪಿಗೆ ಬರಲಿದೆ ಎರಡು ಉಪಚುನಾವಣೆಯಲ್ಲಿ ನಾವು ಗೆಲ್ಲುತ್ತೇವೆ, ಯಾಕಂದರೆ ಇದಕ್ಕೆ ವಿರೋಧ ಪಕ್ಷದವರೇ ಅನುಕೂಲ ಮಾಡಿಕೊಟ್ಟಿದ್ದಾರೆ ಎಂದು ಹೇಳಿದ್ದಾರೆ.