ಭೋಪಾಲ, ಅ.16 (DaijiworldNews/HR): ಭೋಪಾಲ ಸಂಸದೆ, ಸಾದ್ವಿ ಪ್ರಗ್ಯಾ ಸಿಂಗ್ ಠಾಕೂರ್ ಅವರು ಕಬಡ್ಡಿ ಆಡುತ್ತಿರುವ ವಿಡಿಯೊವೊಂದು ವೈರಲ್ ಆಗಿದ್ದು, ಈ ವಿಡಿಯೊ ಚಿತ್ರೀಕರಿಸಿ, ಹರಿಬಿಟ್ಟವರು ರಾವಣರು. ಅವರ ವೃದ್ಧಾಪ್ಯ ಮತ್ತು ಮುಂದಿನ ಜನ್ಮ ಹಾಳಾಗಿ ಹೋಗುತ್ತದೆ ಎಂದು ಸಂಸದೆ ಪ್ರಗ್ಯಾ ಠಾಕೂರ್ ಹೇಳಿದ್ದಾರೆ.
ಪ್ರಗ್ಯಾ ಅವರು ತಮ್ಮ ಸಹಾಕಯರ ನೆರವಿನೊಂದಿಗೆ, ದೀರ್ಘ ಕಾಲದಿಂದಲೂ ವ್ಹೀಲ್ ಚೇರ್ ಮೇಲೆ ಕುಳಿತೇ ಸಂಚರಿಸುತ್ತಿದ್ದರು. ಆದರೆ ಕಬಡ್ಡಿ ಆಡುತ್ತಿರುವ ವಿಡಿಯೊ ಎಲ್ಲರಲ್ಲೂ ಆಶ್ಚರ್ಯ ಮೂಡಿಸಿತ್ತು. ಇದಕ್ಕೂ ಮೊದಲು ಅವರು ಬಾಸ್ಕೆಟ್ ಬಾಲ್ ಆಡಿದ ಮತ್ತು ನರ್ತಿಸಿದ ವಿಡಿಯೊಗಳೂ ವೈರಲ್ ಆಗಿದ್ದವು.
ಈ ಕುರಿತು ಮಾತನಾಡಿರುವ ಪ್ರಗ್ಯಾ, "ನಾನು ಎರಡು ದಿನಗಳ ಹಿಂದೆ ಆರತಿ ಬೆಳಗಲು ಹೋಗಿದ್ದು, ಈ ವೇಳೆ ಮೈದಾನದಲ್ಲಿ ಆಟವಾಡುತ್ತಿದ್ದ ಕೆಲವು ಕ್ರೀಡಾಪಟುಗಳು ನನಗೆ (ಕಬಡ್ಡಿ) ರೈಡ್ ಮಾಡುವಂತೆ ವಿನಂತಿಸಿದರು. ಈ ಸನ್ನಿವೇಶದ ಒಂದು ಚಿಕ್ಕ ತುಣುಕು ಸೆರೆಹಿಡಿದು ಮಾಧ್ಯಮಗಳಲ್ಲಿ ತೋರಿಸಲಾಗಿದ್ದು, ಆ ವಿಡಿಯೋ ಮಾಡಿರುವ ವ್ಯಕ್ತಿ ನಿಮ್ಮ ನಡುವೆ ಇರುವ ರಾವಣ ಎಂದು ಅರ್ಥ. ಸಿಂಧಿ ಸಹೋದರರಲ್ಲಿ ಯಾರೋ ಅಂಥ ಒಬ್ಬ ವ್ಯಕ್ತಿ ಇದ್ದಾರೆ. ಅವರು ನನ್ನನ್ನು ದೊಡ್ಡ ಶತ್ರುವಾಗಿ ನೋಡುತ್ತಿದ್ದಾರೆ. ಯಾಕೆ ಅಂತ ಗೊತ್ತಿಲ್ಲ" ಎಂದರು.
ಇನ್ನು "ನಾನು ಯಾರ ಬಗ್ಗೆ ಹೇಳುತ್ತಿದ್ದೀನೋ ಅವರಲ್ಲಿ ಸಂಸ್ಕಾರ ನಾಶವಾಗಿದೆ. ಅಂಥವರನ್ನು ತಿದ್ದುವ ಅಗತ್ಯವಿದೆ. ಸಂಸ್ಕಾರವನ್ನು ಕಲಿಯದಿದ್ದರೆ, ನಿಮ್ಮ ವೃದ್ಧಾಪ್ಯ ಮತ್ತು ಮುಂದಿನ ಜನ್ಮವೂ ಹಾಳಾಗುತ್ತದೆ. ದೇಶಭಕ್ತರು, ಕ್ರಾಂತಿಕಾರಿಗಳು ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಸಂತರೊಂದಿಗೆ ಹೋರಾಡಿರುವ ರಾವಣ ಅಥವಾ ಕಂಸನಾಗಲಿ ಬದುಕುಳಿದಿರುವ ಇತಿಹಾಸವಿಲ್ಲ. ಪ್ರಸ್ತುತ ಅಧರ್ಮಿ ಅಥವಾ ವಿಧರ್ಮಿ ಉಳಿಯಲೂ ಸಾಧ್ಯವಿಲ್ಲ" ಎಂದಿದ್ದಾರೆ.