ಕಲಬುರಗಿ, ಅ.16 (DaijiworldNews/PY): "ನೀತಿ ಮೇಲೆ ನಾವು ರಾಜಕೀಯ ಮಾಡುತ್ತೇವೆಯೇ ಹೊರತು ಜಾತಿ ಮೇಲೆ ಲೆಕ್ಕಾಚಾರ ಇಟ್ಟು ನಾವು ರಾಜಕೀಯ ಮಾಡುವುದಿಲ್ಲ" ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಕಾಂಗ್ರೆಸ್ ಸಿಂದಗಿ ಹಾಗೂ ಹಾನಗಲ್ ಉಪಚುನಾವಣೆಯಲ್ಲಿ ಗೆಲುವು ಸಾಧಿಸಲಿದೆ. ಅಲ್ಪಸಂಖ್ಯಾತರು ಪ್ರಜ್ಞಾವಂತರಾಗಿದ್ದು, ಯಾರಿಗೆ ಮತ ಹಾಕಿದಲ್ಲಿ ಸೂಕ್ತ ಎನ್ನುವುದು ಅವರಿಗೆ ತಿಳಿದಿದೆ" ಎಂದಿದ್ದಾರೆ.
ಕಾಂಗ್ರೆಸ್ನಲ್ಲಿ ಅಲ್ಪಸಂಖ್ಯಾತರಿಗೆ ಬೆಲೆ ಇಲ್ಲ ಎಂದ ಸಿ ಎಂ ಇಬ್ರಾಹಿಂ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, "ಅವರ ಹೇಳಿಕೆ ಕುರಿತು ನನಗೆ ತಿಳಿದಿಲ್ಲ. ಈ ಕುರಿತು ನಾನು ತಿಳಿದುಕೊಂಡು ಮಾತನಾಡುತ್ತೇನೆ" ಎಂದು ಹೇಳಿದ್ದಾರೆ.
ಮಾಜಿ ಸಚಿವ ಮನಗೂಳಿ ಅವರು ಸಾಯುವ ಮುನ್ನ ಡಿಕೆಶಿ ಅವರನ್ನು ಭೇಟಿಯಾಗಲಿಲ್ಲ ಎಂದು ಹೇಳಿದ ಹೆಚ್ಡಿಕೆ ಹೇಳಿಕೆ ಬಗ್ಗೆ ಪ್ರತಿಕ್ರಯಿಸಿದ ಅವರು, "ಇಂದು ಮನಗೂಳಿ ಅವರು ಇಲ್ಲ. ನನ್ನ ಮಗನ ಜವಾಬ್ದಾರಿ ನಿಮ್ಮದು ಎಂದು ಮನಗೂಳಿ ಅವರು ನನಗೆ ತಿಳಿಸಿದ್ದರು. ನನ್ನ ಮಗನನ್ನು ನಿಮ್ಮ ಮಡಿಲಿಗೆ ಹಾಕಿದ್ದೇನೆ ಎಂದಿದ್ದರು. ಸಾಯುವ ಮುನ್ನ ಮನಗೂಳಿ ಅವರು ಈ ಮಾತನ್ನು ಹೇಳಿದ್ದರು" ಎಂದಿದ್ದಾರೆ.