ಹಾವೇರಿ,ಅ 16 (DaijiworldNews/MS): ಕಾಂಗ್ರೆಸ್ ನಿಂದ ಅಲ್ಪಸಂಖ್ಯಾತರಿಗೆ ಅನ್ಯಾಯ ಮಾಡಲಾಗುತ್ತಿದೆ, ಸ್ವಪಕ್ಷದ ಮುಸ್ಲಿಂ ನಾಯಕರನ್ನೇ ಸಿದ್ದರಾಮಯ್ಯ ಮುಗಿಸುತ್ತಿದ್ದಾರೆ. ಅವರ ಕಿರಾತಕ ರಾಜಕಾರಣಕ್ಕೆ ಮುಸ್ಲಿಂ ನಾಯಕರೇ ಟಾರ್ಗೆಟ್ ಎಂಬ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಆರೋಪಕ್ಕೆ ತಿರುಗೇಟು ನೀಡಿರುವ ಕಾಂಗ್ರೆಸ್ ಮುಖಂಡ ಸಲೀಂ ಅಹ್ಮದ್, ಜೆಡಿಎಸ್ ನಿಂದ ಅವಕಾಶವಾದಿ ರಾಜಕಾರಣ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.
ಹಾವೇರಿ ಜಿಲ್ಲೆ ಹಾನಗಲ್ ನಲ್ಲಿ ಮಾತನಾಡಿದ ಸಲೀಂ ಅಹ್ಮದ್, ಕುಮಾರಸ್ವಾಮಿಯವರು ಯಾವ ಅರ್ಥದಲ್ಲಿ ಆರೋಪ ಮಾಡುತ್ತಿದ್ದಾರೆ ಗೊತ್ತಿಲ್ಲ. ಆದರೆ ಜೆಡಿಎಸ್ ಅವಕಾಶವಾದಿ ರಾಜಕಾರಣ ಮಾಡುತ್ತಿದೆ. ಕಾಂಗ್ರೆಸ್ ಪಕ್ಷದಿಂದ ಯಾವುದೇ ಅಲ್ಪಸಂಖ್ಯಾತ ನಾಯಕರಿಗೂ ಅನ್ಯಾಯವಾಗಿಲ್ಲ ಎಂದರು.
ಜೆಡಿಎಸ್ ಪಕ್ಷವೂ ಮತ ವಿಭಜಿಸಲು ಬಸವಕಲ್ಯಾಣದಲ್ಲೂ ಅಲ್ಪಸಂಖ್ಯಾತ ಅಭ್ಯರ್ಥಿ ಹಾಕಿದರು, ಈಗ ಉಪಚುನಾವಣೆಯಲ್ಲಿಯೂ ಅದೇ ಕೆಲಸ ಮಾಡಿದ್ದಾರೆ. ಕುಮಾರಸ್ವಾಮಿ ಅವಕಾಶವಾದಿ ರಾಜಕಾರಣಿ ಎಂದು ಆರೋಪಿಸಿದರು.
ಕಾಂಗ್ರೆಸ್ ನಿಂದ ಅಲ್ಪಸಂಖ್ಯಾತರನ್ನು ಕಡೆಗಣಿಸಲಾಗಿಲ್ಲ, ಕಡೆಗಣಿಸುವುದೂ ಇಲ್ಲ. ಪಕ್ಷದ ಸಿದ್ಧಾಂತ, ಶಿಸ್ತಿಗೆ ವಿರುದ್ಧವಾಗಿ ನಡೆದುಕೊಂಡಿದ್ದರೆ ಅಂತವರ ವಿರುದ್ಧ ಮಾತ್ರ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.
" ಇಕ್ಬಾಲ್ ಸರಡಗಿ ಅವರನ್ನು ಸೋಲಿಸಿದಿರಿ, ಜಾಫರ್ ಷರೀಫರ ಮೊಮ್ಮಗನನ್ನು ಮುಗಿಸಿದಿರಿ, ರೋಷನ್ ಬೇಗ್ ವಿರುದ್ಧ ರೋಷ ತೀರಿಸಿಕೊಂಡಿರಿ, ತನ್ವೀರ್ ಸೇಠ್ ಮೇಲೆ ಹಗೆ ಸಾಧಿಸಿದಿರಿ, ಇನ್ನೊಬ್ಬರ ಮೇಲಿನ ಸೇಡನ್ನು ಬಡಪಾಯಿ ಸಲೀಂ ಮೇಲೆ ತಿರುಗಿಸಿ ಒಂದೇ ಕಲ್ಲಿನಲ್ಲಿ 2 ಹಕ್ಕಿ ಹೊಡೆದು ʼಕಿರಾತಕ ರಾಜಕಾರಣʼ ಮಾಡಿದಿರಿ " ಎಂದು ಕುಮಾರಸ್ವಾಮಿ ಆರೋಪಿಸಿದ್ದರು.