ರಾಜಸ್ತಾನ, ಅ.16 (DaijiworldNews/PY): 7ನೇ ತರಗತಿ ವಿದ್ಯಾರ್ಥಿನಿಯ ಮೇಲೆ ಶಿಕ್ಷಕನೇ ಅತ್ಯಾಚಾರವೆಸಗಿದ ಘಟನೆ ರಾಜಸ್ತಾನದ ಜೈಪುರದ ಜಂಜುನಿ ಜಿಲ್ಲೆಯಲ್ಲಿ ನಡೆದಿದ್ದು, ಅತ್ಯಾಚಾರವೆಸಗಿ ಈ ವಿಚಾರವನ್ನು ಯಾರಿಗೂ ಹೇಳದಂತೆ ಬೆದರಿಕೆ ಒಡ್ಡಿದ್ದಾನೆ.
ಸರ್ಕಾರಿ ಶಾಲೆಯೊಂದರ ಶಿಕ್ಷಕ ಅಕ್ಟೋಬರ್ 5ರಂದು ಏಳನೇ ತರಗತಿ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರವೆಸಗಿದ್ದಾನೆ. ತರಗತಿ ಮುಗಿದ ಬಳಿಕ ಕೆಲ ಕಾಲ ಇಲ್ಲೇ ಇರುವಂತೆ ವಿದ್ಯಾರ್ಥಿನಿಗೆ ಶಿಕ್ಷಕ ಹೇಳಿದ್ದು, ಗುರುಗಳ ಮಾತಿಗೆ ಬೆಲೆ ನೀಡಿ ವಿದ್ಯಾರ್ಥಿನಿ ಶಾಲೆಯಲ್ಲಿದ್ದಳು.
ಇದಕ್ಕೂ ಮುನ್ನ ಶಿಕ್ಷಕ ಕೆಲ ದಿನಗಳ ಹಿಂದೆ ವಿದ್ಯಾರ್ಥಿನಿಯ ಫೋನ್ಗೆ ಅಸಭ್ಯ ಫೋಟೋ, ವಿಡಿಯೋಗಳನ್ನು ಕಳುಹಿಸಿದ್ದನಂತೆ. ಈ ರೀತಿಯಾಗಿ ಮೆಸೇಜ್ ಮಾಡದಂತೆ ಶಿಕ್ಷಕನಿಗೆ ಹೇಳು ಬೆದರಿದ ವಿದ್ಯಾರ್ಥಿನಿ ಸುಮ್ಮನಾಗಿದ್ದಳು. ಎಲ್ಲರೂ ಶಾಲೆಯಿಂದ ಹೊರಟ ಬಳಿಕ ಶಿಕ್ಷಕ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರವೆಸಗಿದ್ದು, ಯಾರಿಗೂ ಹೇಳದಂತೆ ಬೆದರಿಕೆ ಹಾಕಿದ್ದಾನೆ. ಅಲ್ಲದೇ, ಆತ ಕಳುಹಿಸಿದ್ದ ಮೆಸೇಜ್ಗಳನ್ನು ಮೊಬೈಲ್ನಿಂದ ಡಿಲೀಟ್ ಮಾಡಿಸಿದ್ದಾನೆ.
ಘಟನೆ ನಡೆದು 9 ದಿನಗಳ ಕಾಲ ಸುಮ್ಮನಾಗಿದ್ದ ಬಾಲಕಿ ಘಟನೆಯ ಬಗ್ಗೆ ಯಾರಿಗೂ ಹೇಳದೇ ಒಬ್ಬಳೇ ಕಷ್ಟಪಡುತ್ತಿದ್ದಳು. ಅಕ್ಟೋಬರ್ 14ರಂದು ಶಾಲೆಗೆ ತರಳಿದ ವಿದ್ಯಾರ್ಥಿನಿ ಪುಸ್ತಕದಲ್ಲಿದ್ದ ಚೈಲ್ಡ್ ಹೆಲ್ಪ್ಲೈನ್ ನಂಬರ್ಗೆ ಕರೆ ಮಾಡಿದ್ದು, ನಡೆದ ಘಟನೆಯ ಬಗ್ಗೆ ವಿವರಿಸಿದ್ದಾಳೆ. ಈ ವೇಳೆ ಮಕ್ಕಳ ಕ್ಷೇಮ ಸಮಿತಿ ಅಧಿಕಾರಿಗಳು ಕೂಡಲೇ ವಿದ್ಯಾರ್ಥಿನಿ ಇದ್ದ ಸ್ಥಳಕ್ಕೆ ಬಂದಿದ್ದು, ವಿದ್ಯಾರ್ಥಿನಿಯನ್ನು ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿ ದೂರು ದಾಖಲಿಸಿದ್ದಾರೆ. ದೂರು ದಾಖಲಿಸಿಕೊಂಡ ಪೊಲೀಸರು ಶಿಕ್ಷಕ ಆಳ್ವಾರ್ ಜಿಲ್ಲೆಯಲ್ಲಿ ಇರುವುದನ್ನು ಪತ್ತೆ ಹಚ್ಚಿದ್ದು, ಕೂಡಲೇ ಅಲ್ಲಿಗೆ ತೆರಳಿ ಶಿಕ್ಷಕನನ್ನು ಬಂಧಿಸಿದ್ದಾರೆ.
ಆರೋಪಿಯ ಕುಟುಂಬಸ್ಥರೆಲ್ಲ ಶಿಕ್ಷಕರೇ ಆಗಿದ್ದಾರೆ. ಈತನ ಪತ್ನಿ ಕೂಡಾ ಸರ್ಕಾರಿ ಶಿಕ್ಷಕರೇ. ಈತನ ತಂದೆ ಕೂಡಾ ನಿವೃತ್ತ ಶಿಕ್ಷಕರು. ಅಕ್ಕ-ಭಾವ ಕೂಡಾ ಸರ್ಕಾರಿ ಕಾಲೇಜುಗಳಲ್ಲಿ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಶಿಕ್ಷಕ ಕುಟುಂಬದಿಂದ ಬಂದು ತಾನೂ ಓದಿ ಶಿಕ್ಷಕನಾಗಿದ್ದಾತ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರವೆಸಗಿ ಜೈಲು ಸೇರಿದ್ದಾನೆ.