ಶ್ರೀನಗರ, ಅ.16 (DaijiworldNews/PY): ಶ್ರೀನಗರದಲ್ಲಿ ಇತ್ತೀಚೆಗೆ ನಡೆದ ನಾಗರಿಕ ಹತ್ಯೆಯಲ್ಲಿ ಪಾಲ್ಗೊಂಡಿದ್ದ ಉಗ್ರನೋರ್ವನನ್ನು ಜಮ್ಮು-ಕಾಶ್ಮೀರದ ಪುಲ್ವಾಮ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ಸದೆಬಡೆದಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಮೃತ ಉಗ್ರನನ್ನು ಶ್ರೀನಗರದ ನಿವಾಸಿ ಶಾಹಿದ್ ಬಶೀರ್ ಶೇಖ್ ಎಂದು ಗುರುತಿಸಲಾಗಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಕಾಶ್ಮೀರದ ಐಜಿಪಿ ವಿಜಯ್ ಕುಮಾರ್, ಇತ್ತೀಚೆಗೆ ಶ್ರೀನಗರದಲ್ಲಿ ನಾಗರಿಕ ಹತ್ಯೆಯಲ್ಲಿ ಭಾಗಿಯಾಗಿದ್ದ ಓರ್ವ ಉಗ್ರನನ್ನು ಪುಲ್ವಾಮದಲ್ಲಿ ನಡೆಸಿದ ಎನ್ಕೌಂಟರ್ನಲ್ಲಿ ಹತ್ಯೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಉಗ್ರರು, ಪುಲ್ವಾಮ್ ವಹೀಬಗ್ ಪ್ರದೇಶದಲ್ಲಿನ ಕಾವಲು ಬೇಲಿ ಸಮೀಪ ಇರುವ ಕುರಿತು ಭದ್ರತಾ ಪಡೆಗಳು ಮಾಹಿತಿ ಪಡೆದಿವೆ. ಇಲ್ಲಿ ನಡೆದ ಎನ್ಕೌಂಟರ್ನಲ್ಲಿ ಭದ್ರತಾ ಪಡೆಗಳು ಹಾರಿಸಿದ ಗುಂಡಿಗೆ ಓರ್ವ ಉಗ್ರ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಸ್ಥಳದಿಂದ ಒಂದು ಎಕೆ-47 ಬಂದೂಕು ಹಾಗೂ ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದಿದ್ದಾರೆ.