ಬೆಂಗಳೂರು, ಅ 16 (DaijiworldNews/MS): ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ಹೇಳಿಕೆಯ ವಿರುದ್ದ ಕಾಂಗ್ರೆಸ್ ಪಕ್ಷವೂ ತನ್ನ ವಾಗ್ದಾಳಿಯನ್ನು ಮುಂದುವರಿಸಿದ್ದು, ಮಂಗಳೂರಿನಲ್ಲಿ ಭಜರಂಗದಳದ ಕಾರ್ಯಕರ್ತರಿಗೆ ತ್ರಿಶೂಲ ದೀಕ್ಷೆ ವಿಚಾರವಾಗಿ ಮುಖ್ಯಮಂತ್ರಿಗಳ 'ಆಕ್ಷನ್ & ರಿಯಾಕ್ಷನ್' ಹೇಳಿಕೆ ಕೆಲಸ ಮಾಡತೊಡಗಿದೆ ಎಂದು ಹೇಳಿದೆ.
ಕಾಂಗ್ರೆಸ್ ಈ ಬಗ್ಗೆ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ "ಭಜರಂಗದಳದ ಕಾರ್ಯಕರ್ತರಿಗೆ ತ್ರಿಶೂಲ ದೀಕ್ಷೆ" ಸುದ್ದಿ ತುಣುಕನ್ನು ಟ್ವೀಟ್ ಮಾಡಿ " ಮುಖ್ಯಮಂತ್ರಿಗಳ 'ಆಕ್ಷನ್ & ರಿಯಾಕ್ಷನ್' ಹೇಳಿಕೆ ಕೆಲಸ ಮಾಡತೊಡಗಿದೆ. ಸ್ವಸ್ಥ ಸಮಾಜವನ್ನು ಕಟ್ಟಿಕೊಡಬೇಕಾದವರೇ ಶಾಂತಿಭಂಗಕ್ಕೆ ಕುಮ್ಮಕ್ಕು ನೀಡುತ್ತಿರುವಾಗ ಸಮಾಜಘಾತುಕ ಶಕ್ತಿಗಳಿಗೆ ಇನ್ಯಾವ ಭಯ? ಬಸವರಾಜ್ ಬೊಮ್ಮಾಯಿ ಅವರ ಕುಮ್ಮಕ್ಕಿನ ಆಕ್ಷನ್ಗೆ ಶಸ್ತ್ರಾಸ್ತ್ರ ಹಂಚಿಕೆಯ ರಿಯಾಕ್ಷನ್ ವ್ಯಕ್ತವಾಗಿದೆ ಎಂದು ವ್ಯಂಗ್ಯವಾಡಿದೆ.
ಯಶಸ್ವಿ ಯೋಜನೆಗಳಿಲ್ಲದೆ, ಸಾಧನೆಯ ಬಂಡವಾಳವಿಲ್ಲದೆ, ತಮ್ಮ ವಿಫಲ ಆಡಳಿತವನ್ನು ಮರೆಮಾಚಿ ಮುಂದಿನ ಚುನಾವಣೆಗೆ ನೆಲವನ್ನು ರಕ್ತದಿಂದ ಹದಗೊಳಿಸಲು ಅಣಿಯಾಗುತ್ತಿದೆ ಬಿಜೆಪಿ . ಅದರ ಬಾಗವಾಗಿಯೇ ಆಕ್ಷನ್ & ರಿಯಾಕ್ಷನ್ಗಳಿಗೆ ಕುಮ್ಮಕ್ಕು ಕೊಡುವ ತಂತ್ರ ರೂಪಿಸುತ್ತಿದೆ ಬಿಜೆಪಿ. ರಾಜ್ಯದ ಜನತೆ ಎಚ್ಚರದಿಂದ ಇರಬೇಕು ಎಂದು ಕಾಂಗ್ರೆಸ್ ಹೇಳಿದೆ.